ನವದೆಹಲಿ: 'ವಂದೇ ಮಾತರಂ' ಗೀತೆಯ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿದ ಕೇಂದ್ರದ ಸುತ್ತೋಲೆ ಹಾಗೂ 'ವಂದೇ ಮಾತರಂ'ಗೆ ರಾಷ್ಟ್ರಗೀತೆಯಷ್ಟೇ ಸ್ಥಾನಮಾನ ನೀಡುವ ಇತ್ತೀಚಿನ ತಿದ್ದುಪಡಿ ಪ್ರಶ್ನಿಸಿ ಗಾಯಕ ಟಿ.ಎಂ. ಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
'ವಂದೇ ಮಾತರಂ' ಗೀತೆಯ ನಾಲ್ಕು ಚರಣಗಳು ಸ್ಪಷ್ಟವಾಗಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ಆ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂದು ಕೃಷ್ಣ ಹೇಳಿದ್ದಾರೆ.
'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ'ಯ ವ್ಯಾಪ್ತಿಗೆ 'ವಂದೇ ಮಾತರಂ' ಗೀತೆಯನ್ನು ತರುವ ತಿದ್ದುಪಡಿಯು ಏಕಪಕ್ಷೀಯವಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ' ಎಂದೂ ಕೃಷ್ಣ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
'ವಂದೇ ಮಾತರಂ' ರಾಷ್ಟ್ರಗೀತೆಯಾಗಿ ಮುಂದುವರಿದಿದ್ದರೂ, ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ನ್ಯಾಯಸಮ್ಮತ ಧಾರ್ಮಿಕ ಆಕ್ಷೇಪಣೆಗಳನ್ನು ಹೊಂದಿರುವವರು, ಅದರ ವಿವಾದಿತ ಸಾಲುಗಳನ್ನು ಹಾಡದಿದ್ದಕ್ಕಾಗಿ ಯಾವುದೇ ದಂಡನಾತ್ಮಕ ಕ್ರಮ ಎದುರಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

