ಹೈದರಾಬಾದ್: ಇಲ್ಲಿನ ಆದಿಲಾಬಾದ್ ಜಿಲ್ಲೆಯಲ್ಲಿರುವ ಸರ್ಕಾರಿ ಆರ್‌ಐಎಂಎಸ್ ಆಸ್ಪತ್ರೆಯ ನವಜಾತ ಶಿಶುಗಳ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ, ಮೂರು ನವಜಾತ ಶಿಶುಗಳು ಮೃತಪಟ್ಟಿವೆ.
ಘಟಕದಲ್ಲಿದ್ದ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ ಸೋಮವಾರ ಮಧ್ಯರಾತ್ರಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಘಟಕದಲ್ಲಿ 27 ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಎಲ್ಲಾ ಶಿಶುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಒಂದು ಮಗು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದು, ಉಳಿದ ಎರಡು ಶಿಶುಗಳು ಮಂಗಳವಾರ ಮೃತಪಟ್ಟಿವೆ ಎನ್ನಲಾಗಿದೆ.
ಉಳಿದ ಶಿಶುಗಳ ಪೈಕಿ ನಾಲ್ಕು ಶಿಶುಗಳ ಸ್ಥಿತಿ ಸಹಜವಾಗಿದ್ದು, ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಇನ್ನೂ 20 ಶಿಶುಗಳು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವುಗಳ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಕಂಡಿಷನರ್ ಸಮಪರ್ಕವಾಗಿ ಕಾರ್ಯನಿರ್ವಹಿಸದೇ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.

