ನವದೆಹಲಿ: ಗ್ರಾಹಕರಿಗೆ ಒದಗಿಸುವ ಆಹಾರದ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಝೊಮ್ಯಾಟೊ ತನ್ನ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅನಾಲಾಗ್ ಡೇರಿ (ಕೃತಕ ಅಥವಾ ಸಸ್ಯಜನ್ಯ ಕೊಬ್ಬಿನಿಂದ ತಯಾರಿಸಿದ ನಕಲಿ ಪನೀರ್, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳು) ಪದಾರ್ಥಗಳನ್ನು ಒಳಗೊಂಡಿರುವ ಖಾದ್ಯಗಳ ಪಟ್ಟಿ ಮತ್ತು ಮಾರಾಟದ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಜಾರಿಗೊಳಿಸಿದೆ.
ಅನಾಲಾಗ್ ಡೇರಿ ಪದಾರ್ಥಗಳನ್ನು ಒಳಗೊಂಡಿರುವುದಾಗಿ ಸ್ಪಷ್ಟವಾಗಿ ಘೋಷಿಸಲಾದ ಖಾದ್ಯಗಳನ್ನು ತನ್ನ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಿರುವ ಝೊಮ್ಯಾಟೊ, ರೆಸ್ಟೋರೆಂಟ್‌ಗಳು ಸಂಪೂರ್ಣವಾಗಿ ನೈಸರ್ಗಿಕ ಡೇರಿ ಉತ್ಪನ್ನಗಳಿಗೆ ಬದಲಾಯಿಸಿಕೊಳ್ಳಬೇಕು ಅಥವಾ ತಮ್ಮ ಮೆನುಗಳಿಂದ ನಿಯಮಬಾಹಿರ ಖಾದ್ಯಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿದೆ.
ತಾವು ಝೊಮ್ಯಾಟೋದಲ್ಲಿ ಪಟ್ಟಿ ಮಾಡಿರುವ ಆಹಾರವನ್ನೇ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ರೆಸ್ಟೋರಂಟ್‌ಗಳು ಉತ್ಪನ್ನದ ಲೇಬಲ್‌ಗಳು ಮತ್ತು ಪೂರೈಕೆದಾರರ ಘೋಷಣೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಕಡ್ಡಾಯವಾಗಿದೆ ಎಂದು ಅದು ತಿಳಿಸಿದೆ.
ಸೂಚನೆಗಳನ್ನು ಪಾಲಿಸಲು ವಿಫಲಗೊಳ್ಳುವ ಮತ್ತು ನಿಯಮಗಳನ್ನು ಉಲ್ಲಂಘಿಸುವ ರೆಸ್ಟೋರಂಟ್‌ಗಳನ್ನು ಪ್ಲ್ಯಾಟ್‌ಫಾರ್ಮ್‌ನಿಂದ ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಝೊಮ್ಯಾಟೊ ಎಚ್ಚರಿಕೆ ನೀಡಿದೆ.
ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ನಿಯಂತ್ರಣಾತ್ಮಕ ತನಿಖೆಯ ಮಧ್ಯೆ ಆಹಾರದ ಪಾರದರ್ಶಕತೆಯನ್ನು ಹೆಚ್ಚಿಸಲು, ಗುಣಮಟ್ಟದ ಮಾನದಂಡಗಳನ್ನು ಎತ್ತಿಹಿಡಿಯಲು ಮತ್ತು ಗ್ರಾಹಕರ ಆರೋಗ್ಯವನ್ನು ರಕ್ಷಿಸಲು ಈ ಹೆಜ್ಜೆಯನ್ನು ಇಡಲಾಗಿದೆ ಎಂದು ಕಂಪೆನಿಯು ತಿಳಿಸಿದೆ.

