ಜೈಪುರ: ಫ್ಲೈ ದುಬೈ ವಿಮಾನದ ಪತನ ತಪ್ಪಿಸಿ, 174 ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗಾಗಿ ರಾಜಸ್ಥಾನದ ಉದಯಪುರದ ಇಬ್ಬರು ಪೇಟ ತಯಾರಕರು ವಿಶೇಷ ಪೇಟವೊಂದನ್ನು ವಿನ್ಯಾಸಗೊಳಿಸಿದ್ದಾರೆ.
ಉದಯಪುರದ ಪೇಟ ತಯಾರಿಕಾ ಸಂಸ್ಥೆ ಶಾಹಿ ತಾಜ್‌ನ ಜಿನೇಶ್ ಮತ್ತು ಜಯಂತ್ ಕೊಠಾರಿ ಅವರು ಮಚ್ಚರ್‌ಗೆ ಪೇಟವನ್ನು ತಲುಪಿಸಲು ಸಹಾಯ ಮಾಡುವಂತೆ ಪ್ರಧಾನಮಂತ್ರಿಯವರ ಕಚೇರಿಗೆ ಮನವಿ ಮಾಡಿದ್ದಾರೆ.
ರಾಜಸ್ಥಾನಿ ಸಾಂಪ್ರದಾಯಿಕ ಪೇಟ ಇದಾಗಿದ್ದು, ಮೇವಾಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಪೈಲಟ್‌ಗಳು ಧರಿಸುವ ಕ್ಯಾಪ್‌ನ ಆಕಾರದಲ್ಲೇ ವಿನ್ಯಾಸ ಮಾಡಲಾಗಿದ್ದು ಪೇಟವು ಕೇಸರಿ ಮತ್ತು ನೀಲಿ ಬಣ್ಣದ್ದಾಗಿದೆ. '174 ಕರೇಜ್' (ಧೈರ್ಯ) ಎಂದು ಪೇಟದ ಮೇಲೆ ಬರೆಯಲಾಗಿದೆ.
ಸೆ. 30ರಂದು ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ ವಿಮಾನವನ್ನು ವಶಕ್ಕೆ ತೆಗೆದುಕೊಂಡು ಪತನಗೊಳಿಸಲು ಸಹ ಪೈಲಟ್ ಯತ್ನಿಸಿದ್ದು, ವಿಮಾನ ಚಾಲನೆ ಮಾಡುತ್ತಿದ್ದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚರ್ ದುರಂತವನ್ನು ತಪ್ಪಿಸಿದ್ದರು. ವಿಮಾನದಲ್ಲಿ 174 ಪ್ರಯಾಣಿಕರಿದ್ದರು.



