ಮುಂಬೈ : ನಾಲ್ಕನೇ ವಿಶ್ವ ಹಿಂದೂ ಸಮಾವೇಶ-2026, ಡಿಸೆಂಬರ್ 18ರಿಂದ 20ರವರೆಗೆ ಮುಂಬೈನಲ್ಲಿ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಸಮಾವೇಶದ ಉದ್ಘಾಟನಾ ಭಾಷಣ ಮಾತನಾಡಲಿದ್ದಾರೆ ಎಂದು ಸಂಘಟಕರು ಗುರುವಾರ ತಿಳಿಸಿದ್ದಾರೆ.
ಸಮಾನ ಹಂಚಿಕೆಯ ಬದ್ಧತೆ ಹಾಗೂ ಸಾಮೂಹಿಕ ಸಂಕಲ್ಪದ ಮಹತ್ವ ಸಾರುವ 'ಸಮಾನಂ ವೃತಂ ಸಹ ಚಿತ್ತಂ' ಎಂಬ ಘೋಷವಾಕ್ಯದ ಆಧಾರದ ಮೇಲೆ ಈ ಬಾರಿಯ ಸಮಾವೇಶ ನಡೆಯಲಿದೆ. ಇದರೊಂದಿಗೆ 'ವರ್ಲ್ಡ್ ಹಿಂದೂ ಎಕ್ಸ್‌ಪೋ' ಇರಲಿದೆ.
ಹಿಂದೂ ನಾಯಕರು ಮತ್ತು ಸಂಘ-ಸಂಸ್ಥೆಗಳು ಸಂಪರ್ಕ ಸಾಧಿಸಲು ಮತ್ತು ಸಹಯೋಗದೊಂದಿಗೆ ಮುಂದುವರಿಯಲು ಈ ಸಮಾವೇಶವು ಜಾಗತಿಕ ವೇದಿಕೆಯಾಗಿದೆ. ನಗರದ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾವೇಶ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂ ನಾಯಕರು, ಚಿಂತಕರು ಮತ್ತು ವೃತ್ತಿಪರರು ಸೇರಿದಂತೆ 60 ದೇಶಗಳ 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟು 45 ಅಧಿವೇಶನಗಳು ನಡೆಯಲಿದ್ದು, 150ಕ್ಕೂ ಹೆಚ್ಚು ಮಂದಿ ಭಾಷಣಕಾರರು ಭಾಗಿಯಾಗಲಿದ್ದಾರೆ ಎಂದೂ ಹೇಳಿದ್ದಾರೆ.
ನಾಲ್ಕು ವಿಶೇಷ ಅಧಿವೇಶನ
ಧರ್ಮ ಸಮಾಜ ವಿಶ್ವಕರ್ಮ ಮತ್ತು ಭಾಷಾ ಮೇಲೆ ಕೇಂದ್ರೀಕರಿಸುವ ನಾಲ್ಕು ವಿಶೇಷ ಅಧಿವೇಶನಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. 'ಧರ್ಮ' ಅಧಿವೇಶನದಲ್ಲಿ ವಿವಿಧ ಧಾರ್ಮಿಕ ಸಂಪ್ರದಾಯಗಳು ಸಮುದಾಯಗಳು ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಪಂಥಗಳ ನಾಯಕರು 'ಸಮಕಾಲೀನ ಸಮಾಜದಲ್ಲಿ ಧರ್ಮದ ಪಾತ್ರದ ಕುರಿತು ಚರ್ಚಿಸಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



