ಇಂಫಾಲ್: ಭಾರತೀಯ ಒಕ್ಕೂಟದೊಂದಿಗೆ ಮಣಿಪುರದ ವಿಲೀನವನ್ನು ವಿರೋಧಿಸಿ, ರಾಜ್ಯದ ಏಳು ನಿಷೇಧಿತ ಸಶಸ್ತ್ರ ಸಂಘಟನೆಗಳು ಅಕ್ಟೋಬರ್ 15ರಂದು 'ರಾಷ್ಟ್ರೀಯ ಕಪ್ಪು ದಿನ' ಆಚರಿಸಲು ಹಾಗೂ 12 ಗಂಟೆಗಳ ಬಂದ್‌ಗೆ ಕರೆ ನೀಡಿವೆ.
1949ರಲ್ಲಿ ಮಣಿಪುರವನ್ನು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಯು ಅಂತರರಾಷ್ಟ್ರೀಯ ಮತ್ತು ದೇಶೀಯ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಈ ಪೈಕಿ ಆರು ಸಂಘಟನೆಗಳು 'ಸಮನ್ವಯ ಸಮಿತಿ' (Coordination Committee) ಒಕ್ಕೂಟದ ಭಾಗವಾಗಿವೆ. ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ, ಕಾಂಗ್ಲೀ ಯಾವೋಲ್ ಕನ್ನಾ ಲುಪ್, ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (PREPAK), PREPAK-Pro, ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ಮತ್ತು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಈ ಆರು ಸಂಘಟನೆಗಳಾಗಿವೆ. ಏಳನೇ ಸಂಘಟನೆಯಾದ ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿ ಬಂದ್‌ಗೆ ಕರೆ ನೀಡಿದೆ.
ಮಣಿಪುರವನ್ನು ಅದರ ಹಿಂದಿನ ಹೆಸರಾದ 'ಕಾಂಗ್ಲೀಪಾಕ್' ಎಂದು ಉಲ್ಲೇಖಿಸಿರುವ ಸಂಘಟನೆಗಳು, ವಿಲೀನ ಪ್ರಕ್ರಿಯೆಯು ಕಾನೂನುಬಾಹಿರವಾಗಿತ್ತು ಎಂದು ಪ್ರತಿಪಾದಿಸಿವೆ. ಈ ವಾದಕ್ಕೆ ಪೂರಕವಾಗಿ ವಿಶ್ವಸಂಸ್ಥೆಯ ಚಾರ್ಟರ್‌ನ ವಿಧಿ 2(4), ಒಪ್ಪಂದಗಳ ಕಾನೂನಿನ ಮೇಲಿನ ವಿಯೆನ್ನಾ ಸಮಾವೇಶ, ಮಣಿಪುರ ರಾಜ್ಯ ಸಂವಿಧಾನ ಕಾಯಿದೆ-1947 ಮತ್ತು ಭಾರತೀಯ ಸ್ವಾತಂತ್ರ್ಯ ಕಾಯಿದೆ-1947 ಅನ್ನು ಉಲ್ಲೇಖಿಸಿವೆ.
1949ರ ಸೆಪ್ಟೆಂಬರ್ 21ರಂದು ಶಿಲಾಂಗ್ ನಲ್ಲಿ ನಡೆದ ಮಣಿಪುರ ವಿಲೀನ ಒಪ್ಪಂದಕ್ಕೆ ಸಹಿ ಹಾಕುವಂತೆ ಅಂದಿನ ರಾಜ ಬೋಧಚಂದ್ರ ಅವರ ಮೇಲೆ ಒತ್ತಡ ಹೇರಲಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿ, ಬಂದೂಕಿನ ಮುನೆಯಲ್ಲಿ ಒಪ್ಪಂದಕ್ಕೆ ಸಹಿ ಪಡೆಯಲಾಗಿತ್ತು ಎಂದು ಸಂಘಟನೆಗಳು ಆರೋಪಿಸಿವೆ.
ಭಾರತವು ಸಣ್ಣ ರಾಷ್ಟ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಹಾಗೂ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಮೂಲಕ ಸಾಮ್ರಾಜ್ಯಶಾಹಿ ಧೋರಣೆ ಅನುಸರಿಸಿದೆ ಎಂದು ಸಂಘಟನೆಗಳು ಟೀಕಿಸಿವೆ. ಈ ಬೆಳವಣಿಗೆಗಳನ್ನು ಜಾಗತಿಕ ವಸಾಹತುಶಾಹಿ ವಿರೋಧಿ ಚಳವಳಿಗಳಿಗೆ ಹೋಲಿಸಿರುವ ಅವು, ನವದೆಹಲಿಯ 'ವಸಾಹತುಶಾಹಿ ಆಕ್ರಮಣ'ವನ್ನು ವಿರೋಧಿಸುವುದನ್ನು ಮುಂದುವರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿವೆ.
ಮುಖ್ಯವಾಗಿ ಇಂಫಾಲ್ ಕಣಿವೆಯ ಮೈತೈ ಸಮುದಾಯದವರನ್ನು ಒಳಗೊಂಡಿರುವ ಈ ಸಂಘಟನೆಗಳು, ಬಂದ್ ನಿಂದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡುವುದಾಗಿ ತಿಳಿಸಿವೆ. ತುರ್ತು ವೈದ್ಯಕೀಯ ಸೇವೆಗಳು, ಮಾಧ್ಯಮ ಕಾರ್ಯಾಚರಣೆಗಳು ಮತ್ತು ಧಾರ್ಮಿಕ ಚಟುವಟಿಕೆಗಳು ಬಂದ್ ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿವೆ.



