ವಶಕ್ಕೆ ಪಡೆದಿರುವ ವಕೀಲರ ಸುರಕ್ಷತೆಯನ್ನು ಖಚಿತಪಡಿಸಬೇಕು. ಅವರಿಗೆ ಕಾನೂನು ನೆರವು ಒದಗಿಸಬೇಕು. ಬಂಧನಕ್ಕೆ ಕಾನೂನುಬದ್ಧ ಆಧಾರವಿಲ್ಲದವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು SCBA ಆಗ್ರಹಿಸಿದೆ.
ಹಿರಿಯ ಮತ್ತು ಕಿರಿಯ ವಕೀಲರು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಸಂಘವು ಹೇಳಿಕೆಯಲ್ಲಿ ತಿಳಿಸಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತಾಗಿ ಚರ್ಚಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ (CJI) ಮನವಿ ಮಾಡಲು SCBA ನಿರ್ಧರಿಸಿದೆ.
ಬಂಧನಕ್ಕೆ ಕಾರಣವಾದ ಸನ್ನಿವೇಶಗಳನ್ನು ಪರಿಶೀಲಿಸಬೇಕು. ವಕೀಲರ ಮೇಲೆ ಬಲಪ್ರಯೋಗ ನಡೆಸಿರುವ ಬಗ್ಗೆ ಪರಿಶೀಲನೆ ನಡೆಸಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಸಂಘವು ಒತ್ತಾಯಿಸಿದೆ.
ಸುಮಾರು 45 ವಕೀಲರ ಬಿಡುಗಡೆಗಾಗಿ ದಿಲ್ಲಿ ಪೊಲೀಸ್ ನ DCP ಅವರೊಂದಿಗೆ ಮಾತನಾಡಿರುವುದಾಗಿ SCBA ಅಧ್ಯಕ್ಷ ಹಾಗೂ ಹಿರಿಯ ವಕೀಲ ಪ್ರದೀಪ್ ರಾಯ್ ತಿಳಿಸಿದ್ದಾರೆ. CJI ಕೂಡ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ವಕೀಲರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸಮೀಪದ ಭಗವಾನ್ ದಾಸ್ ರಸ್ತೆಯಲ್ಲಿ ಔಪಚಾರಿಕ ಉಡುಪು ಧರಿಸಿದ್ದ ಹಲವು ವಕೀಲರು ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಅವರನ್ನು ತಡೆದರು.
ಪೊಲೀಸರು ತಡೆಯುವ ಮೊದಲು ವಕೀಲರು ಘೋಷಣೆಗಳನ್ನು ಕೂಗಿದರು. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವ ಪೋಸ್ಟರ್ ಗಳನ್ನು ಪ್ರದರ್ಶಿಸಿದರು. ಬಳಿಕ ಪೊಲೀಸರು ಹಲವು ವಕೀಲರನ್ನು ವಶಕ್ಕೆ ಪಡೆದರು ಎಂದು ತಿಳಿದು ಬಂದಿದೆ.

