ಇಂಫಾಲ: ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 9.35 ಗಂಟೆಗೆ ನಾಗಾ ಪ್ರಾಬಲ್ಯದ ಕಾಮ್ಜಾಂಗ್ ಜಿಲ್ಲೆಯಲ್ಲಿನ ಕುಕಿ ಬಾಹುಳ್ಯದ ವಸತಿ ಪ್ರದೇಶವಾದ ಚಸ್ಸಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಐದು ಮಕ್ಕಳ ತಾಯಿಯಾದ ಮಹಿಳೆಯ ಕುತ್ತಿಗೆ ಭಾಗಕ್ಕೆ ಗುಂಡು ತಾಗಿದ್ದು, ಆಕೆ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಈ ಹತ್ಯೆಯಿಂದ ಕುಕಿ ಮತ್ತು ನಾಗಾ ಸಶಸ್ತ್ರ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಶನಿವಾರ ಬೆಳಗ್ಗೆ ಕೂಡಾ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

