ಕಡಿಮೆ ದರದಲ್ಲಿ ವೇಗದ ಸೇವೆ – ಬೃಹತ್ ಸರಕು ಸಾಗಣೆಗೆ ವಿಶೇಷ ರಿಯಾಯಿತಿ; ನಿಗಮದ ಆದಾಯ ಹೆಚ್ಚಳಕ್ಕೆ ಹೊಸ ಹೆಜ್ಜೆ: ಸಚಿವ ಸಿ.ಪಿ. ಜಾನ್
ತಿರುವನಂತಪುರಂ: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಗೋ ಕೊರಿಯರ್ ಸೇವೆಗೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಡಿಮೆ ದರದಲ್ಲಿ ವೇಗವಾಗಿ ಸರಕು ಸಾಗಣೆ ಮಾಡುವ ವ್ಯವಸ್ಥೆ ಜನಪ್ರಿಯವಾಗುತ್ತಿದೆ.
ಸಾಮಾನ್ಯ ಜನರು, ವ್ಯಾಪಾರಿಗಳು ಹಾಗೂ ವಿವಿಧ ಸಂಸ್ಥೆಗಳಿಗೆ ಕೈಗೆಟುಕುವ ದರದಲ್ಲಿ ಸರಕು ಸಾಗಣೆ ಸೌಲಭ್ಯ ಒದಗಿಸುತ್ತಿರುವುದರಿಂದ ಖಾಸಗಿ ಕಾರ್ಗೋ ಏಜೆನ್ಸಿಗಳಿಗೆ ಹೋಲಿಸಿದರೆ ಕೆಎಸ್‌ಆರ್‌ಟಿಸಿ ಸೇವೆಯನ್ನು ಅವಲಂಬಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
2020ರಲ್ಲಿ ಅಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ ಈ ಯೋಜನೆ ಬಳಿಕ ಸ್ಥಗಿತಗೊಂಡಿತ್ತು. ಇದೀಗ ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವ ಸಿ.ಪಿ. ಜಾನ್ ಅವರು ಯೋಜನೆಯನ್ನು ಸಮಗ್ರವಾಗಿ ಪುನರ್‌ರೂಪಿಸಿ ಮತ್ತೆ ಸಕ್ರಿಯಗೊಳಿಸಿದ್ದಾರೆ.
₹50ರಿಂದ ಕಾರ್ಗೋ ಸೇವೆ
‘ಅತ್ಯಂತ ಕಡಿಮೆ ವೆಚ್ಚ, ಅತ್ಯಂತ ವೇಗದ ವಿತರಣೆ’ ಎಂಬ ಗುರಿಯೊಂದಿಗೆ ಕೆಎಸ್‌ಆರ್‌ಟಿಸಿ ಕಾರ್ಗೋ-ಕೊರಿಯರ್ ಸೇವೆ ಕಾರ್ಯನಿರ್ವಹಿಸುತ್ತಿದೆ. ವ್ಯಕ್ತಿಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳು ಹಾಗೂ ವಿವಿಧ ಸಂಸ್ಥೆಗಳಿಗೆ ವಿಶ್ವಾಸಾರ್ಹ ಸರಕು ಸಾಗಣೆ ವ್ಯವಸ್ಥೆಯಾಗಿ ಇದು ಹೊರಹೊಮ್ಮುತ್ತಿದೆ.
ಕಾರ್ಗೋ ಸೇವೆಯ ದರ ಕೇವಲ ₹50ರಿಂದ ಆರಂಭವಾಗುತ್ತದೆ. ಸರಕಿನ ತೂಕ ಮತ್ತು ಸಾಗಣೆ ದೂರಕ್ಕೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಾಗಲಿದೆ. 100 ಕೆ.ಜಿ.ಗಿಂತ ಹೆಚ್ಚಿನ ಬೃಹತ್ ಸರಕು ಸಾಗಣೆಗೆ ವಿಶೇಷ ರಿಯಾಯಿತಿ ದರಗಳನ್ನು ನಿಗದಿಪಡಿಸಲಾಗಿದೆ. ಇಂತಹ ಸರಕುಗಳ ಸಾಗಣೆ ದರ ಪ್ರತಿ ಕೆ.ಜಿಗೆ ₹2.50ರಿಂದ ಆರಂಭವಾಗುತ್ತದೆ.
ಒಂದು ಟನ್ ಮೊಬೈಲ್ ಫೋನ್ ಸಾಗಿಸುವ ಮೂಲಕ ಚಾಲನೆ
ದೆಹಲಿಯಿಂದ ಏರ್ ಇಂಡಿಯಾ ವಿಮಾನದ ಮೂಲಕ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತರಲಾಗಿದ್ದ ಒಂದು ಟನ್ ಮೊಬೈಲ್ ಫೋನ್‌ಗಳನ್ನು ಕೆಎಸ್‌ಆರ್‌ಟಿಸಿ ಬಾಡಿಗೆಗೆ ಪಡೆದ ವಿಶೇಷ ಟ್ರಕ್‌ನಲ್ಲಿ ಆಲುವಾಕ್ಕೆ ಸಾಗಿಸುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿತ್ತು.
ತಿರುವನಂತಪುರಂ ದೇಶೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ. ಜಾನ್ ಅವರು ಸೇವೆಗೆ ಹಸಿರು ನಿಶಾನೆ ತೋರಿಸಿದ್ದರು.
ರಾಜ್ಯ ಸರ್ಕಾರದ ನೂರು ದಿನಗಳ ಕರ್ಮಯೋಜನೆಯ ಭಾಗವಾಗಿ ಜಾರಿಗೊಳಿಸಲಾದ ಈ ಯೋಜನೆಯು ಕೆಎಸ್‌ಆರ್‌ಟಿಸಿಯ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕಾರ್ಗೋ ಸೇವೆಯು ನಿಗಮದ ಆದಾಯ ಹೆಚ್ಚಳಕ್ಕೆ ದೊಡ್ಡ ಕೊಡುಗೆ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



