ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರು ಉಣ್ಣಿಯಾಲ್ ಬೀಚ್ನಲ್ಲಿ ಮತ್ತಿ ಮೀನುಗಳ ಭಾರೀ ಸಮೂಹ ದಡಕ್ಕೆ ಅಪ್ಪಳಿಸಿದ್ದು, ಸ್ಥಳೀಯರು ಮೀನುಗಳನ್ನು ಸಂಗ್ರಹಿಸಲು ಮುಗಿಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸಮುದ್ರದ ಪ್ರತಿಯೊಂದು ಅಲೆಯೊಂದಿಗೂ ಮತ್ತಿ ಮೀನುಗಳ ಹಿಂಡು ದಡಕ್ಕೆ ಬಂದು ಸೇರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಬುಟ್ಟಿಗಳು ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ಮೀನುಗಳನ್ನು ಸಂಗ್ರಹಿಸಿದರು. ಈ ಅಪರೂಪದ ದೃಶ್ಯವನ್ನು ನೋಡಿದ ಜನರು ಮೀನುಗಳನ್ನು ಸಂಗ್ರಹಿಸಲು ಕಡಲತೀರಕ್ಕೆ ಧಾವಿಸಿದರು.
ಈ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಿಂದಲೂ ಜನರು ಉಣ್ಣಿಯಾಲ್ ಬೀಚ್ಗೆ ಆಗಮಿಸಿದರು. ಮೀನುಗಳು ದೊಡ್ಡ ಪ್ರಮಾಣದಲ್ಲಿ ದಡಕ್ಕೆ ಬಂದು ಸೇರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಉಣ್ಣಿಯಾಲ್ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿಯಲ್ಲಿ ಮತ್ತಿ ಮೀನುಗಳು ಭಾರೀ ಪ್ರಮಾಣದಲ್ಲಿ ದಡಕ್ಕೆ ಬಂದು ಸೇರಿದ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.



