HEALTH TIPS

ಚುನಾವಣಾ ಆಯೋಗದ 'ಫಾರ್ಮ್ 6' ಅಭಿಯಾನಕ್ಕೆ ಮಾಜಿ CEC ಎಸ್.ವೈ. ಖುರೈಶಿ ಆಕ್ಷೇಪ

ನವದೆಹಲಿ:  ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಹೆಸರು ಕಳೆದುಕೊಂಡ ಮತದಾರರನ್ನು ಮರುನೋಂದಾಯಿಸಲು 'ಫಾರ್ಮ್ 6' ಬಳಸುವ ಚುನಾವಣಾ ಆಯೋಗದ ಕ್ರಮವನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಪ್ರಶ್ನಿಸಿದ್ದಾರೆ. 


'ಫಾರ್ಮ್ 6' ಭರ್ತಿ ಮಾಡುವಂತೆ ಒತ್ತಾಯಿಸಲ್ಪಟ್ಟವರು ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಅಪರಾಧ ಎಸಗಿದಂತಾಗುತ್ತದೆ.

ಹಾಗೆ ಮಾಡಲು ಅವರನ್ನು ಒತ್ತಾಯಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಆ ಅಪರಾಧಕ್ಕೆ ಕುಮ್ಮಕ್ಕು ನೀಡಿದವರಾಗುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಹೊಸ ಮತದಾರರ ನೋಂದಣಿಗಾಗಿ ಇರುವ 'ಫಾರ್ಮ್ 6' ಹೊಸ ಮತದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಖುರೈಶಿ ಹೇಳಿದ್ದಾರೆ. ಅ.1ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯು 'ಈ ಅಪರಾಧಕ್ಕೆ ಚುನಾವಣಾ ಆಯೋಗದ ಕುಮ್ಮಕ್ಕು' ನೀಡಿರುವುದನ್ನು ತೋರಿಸುತ್ತದೆ ಎಂದೂ ಅವರು ಟೀಕಿಸಿದ್ದಾರೆ.

SIR ಪೂರ್ಣಗೊಂಡಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಟ್ಟಿಯಿಂದ ಹೊರಗುಳಿದಿರಬಹುದಾದ ಅರ್ಹ ಮತದಾರರನ್ನು ನೋಂದಾಯಿಸಲು 'ವಿಶೇಷ ಅಭಿಯಾನ' ನಡೆಸುವಂತೆ ಚುನಾವಣಾ ಆಯೋಗ ಗುರುವಾರ ಸೂಚಿಸಿತ್ತು.

ಈ ಅಭಿಯಾನದಲ್ಲಿ 'ಫಾರ್ಮ್ 6' ಮೂಲಕ ಅರ್ಹ ನಾಗರಿಕರು, ಮೊದಲ ಬಾರಿಗೆ ಮತ ಚಲಾಯಿಸುವವರು ಮತ್ತು ಪ್ರಾಥಮಿಕ SIR ವೇಳೆ ಪಟ್ಟಿಯಿಂದ ಹೊರಗುಳಿದ ಯುವಕರನ್ನು ನೋಂದಾಯಿಸುವ ಉದ್ದೇಶ ಹೊಂದಲಾಗಿದೆ. ಜುಲೈನಲ್ಲಿ 'ಫಾರ್ಮ್ 6'ಗೆ ಸೇರಿಸಲಾಗಿದ್ದ ಹೆಚ್ಚುವರಿ ಘೋಷಣೆಯನ್ನೂ ಈಗ ತೆಗೆದುಹಾಕಲಾಗಿದೆ. ಆನ್‌ಲೈನ್ ಅರ್ಜಿಯಲ್ಲಿದ್ದ ಈ ಘೋಷಣೆಯು ಅರ್ಜಿದಾರರು ತಮ್ಮ ಪೋಷಕರ ವಿವರಗಳನ್ನು ಇತ್ತೀಚಿನ SIR ದಾಖಲೆಗಳಿಗೆ ಹೊಂದಿಸುವುದನ್ನು ಕಡ್ಡಾಯಗೊಳಿಸಿತ್ತು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ SIR ಮತ್ತು ಅದರ ಅನುಷ್ಠಾನದ ಕುರಿತು ನಿರಂತರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

'ಫಾರ್ಮ್ 6', 'ಫಾರ್ಮ್ 7' ವಿವಾದ

SIR ವಿವಾದದ ಕೇಂದ್ರದಲ್ಲಿ 'ಫಾರ್ಮ್ 6' ಮತ್ತು 'ಫಾರ್ಮ್ 7' ಇವೆ. 'ಫಾರ್ಮ್ 6' ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದ್ದರೆ, 'ಫಾರ್ಮ್ 7' ಮೂಲಕ ನೋಂದಾಯಿತ ಮತದಾರರು ಬೇರೊಬ್ಬರ ಹೆಸರನ್ನು ಸೇರಿಸುವುದನ್ನು ವಿರೋಧಿಸಬಹುದು ಅಥವಾ ಹೆಸರು ತೆಗೆದುಹಾಕುವಂತೆ ಕೋರಬಹುದು.

ಸಂಸತ್ತಿನ ಸ್ಪಷ್ಟ ಅನುಮೋದನೆಯ ಅಗತ್ಯವಿದ್ದ ಈ ಎರಡು ನಮೂನೆಗಳಲ್ಲಿ 'ಅಕ್ರಮ' ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು ಎಂಬುದನ್ನು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ನ ಸರಣಿ ತನಿಖಾ ವರದಿಗಳು ಬಹಿರಂಗಪಡಿಸಿದ ಬಳಿಕ ಈ ವಿಚಾರದ ಪರಿಶೀಲನೆ ತೀವ್ರಗೊಂಡಿತು. ಆದರೆ, SIRಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನೂ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಆಯೋಗವು ಬಿಜೆಪಿಗೆ ಒಲವು ತೋರುತ್ತಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಹಾಗೂ ಯುವಜನ ನೇತೃತ್ವದ 'ಕಾಕ್ರೋಚ್ ಜನತಾ ಪಾರ್ಟಿ' (CJP), ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿವೆ.

ಗಾಂಧಿ ಜಯಂತಿಯಂದು ದಿಲ್ಲಿ ಮತ್ತು ಮುಂಬೈನಲ್ಲಿ ಪ್ರತಿಭಟನೆಗಳು ನಡೆದವು. ನಟರು, ವಿರೋಧ ಪಕ್ಷಗಳ ನಾಯಕರು ಮತ್ತು ನಾಗರಿಕ ಸಮಾಜದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದರು.

TCSಗೆ ಆದೇಶ ನೀಡಿದವರು ಯಾರು?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಆನ್‌ಲೈನ್ 'ಫಾರ್ಮ್ 6'ನಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಚುನಾವಣಾ ಆಯೋಗದಿಂದ ಉತ್ತರ ಕೋರಿದರು. ಈ ಬದಲಾವಣೆಗಳನ್ನು ಜಾರಿಗೆ ತರಲು 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (TCS)ಗೆ ಯಾರು ಆದೇಶಿಸಿದರು ಮತ್ತು ಕಂಪೆನಿಯೊಳಗೆ ಅವುಗಳಿಗೆ ಯಾರು ಅನುಮೋದನೆ ನೀಡಿದರು ಎಂಬುದನ್ನೂ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಮುಸ್ಲಿಂ ಮತದಾರರ ವಿರುದ್ಧ ಸಾಮೂಹಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂಬ ಆರೋಪ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಲು ಸಲ್ಲಿಸಲಾದ ಅರ್ಜಿಗಳ ದಾಖಲಾದ ಫಲಿತಾಂಶಗಳಲ್ಲಿನ ವ್ಯತ್ಯಾಸಗಳು 'ಫಾರ್ಮ್ 7' ವಿವಾದದ ಕೇಂದ್ರಬಿಂದುವಾಗಿವೆ.

'ಫಾರ್ಮ್ 7' ದುರುಪಯೋಗಪಡಿಸಿಕೊಂಡು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪದ ಕುರಿತು ಕ್ರಿಮಿನಲ್ ತನಿಖೆ ಸೇರಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಆಗ್ರಹಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries