ಡೆಹ್ರಾಡೂನ್: ಉತ್ತರಾಖಂಡದ ಮತದಾರರ ಅಂತಿಮಪಟ್ಟಿ ಪ್ರಕಟವಾಗಿದ್ದು, 71,58. 949 ಮತದಾರರ ಹೆಸರು ದಾಖಲಾಗಿವೆ. ಜೂನ್ನಲ್ಲಿ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಆರಂಭವಾಗುವ ಮೊದಲು ದಾಖಲಾದ ಅಂಕಿಅಂಶಗಳಿಗೆ ಹೋಲಿಸಿದರೆ 8,01,813 ರಷ್ಟು ಮತದಾರರ ಸಂಖ್ಯೆ ಕಡಿಮೆಯಾಗಿದೆಯೆಂದು ಮುಖ್ಯ ಚುನಾವಣಾಧಿಕಾರಿಯವರ ಕಚೇರಿಯ ಪ್ರಕಟಣೆ ಶನಿವಾರ ತಿಳಿಸಿದೆ.
ಜೂನ್ 8ರಂದು ಉತ್ತರಾಖಂಡದಲ್ಲಿ ಎಸ್ಐಆರ್ ಆರಂಭಗೊಂಡಾಗ , ರಾಜ್ಯದಲ್ಲಿ ಒಟ್ಟು 79,60,762 ನೋಂದಾಯಿತ ಮತದಾರರಿದ್ದರು. ಜುಲೈ 14ರಂದು ಪ್ರಕಟವಾದ ಕರಡುಪಟ್ಟಿಯಲ್ಲಿ 71,33,785 ಮತದಾರರ ಹೆಸರುಗಳಿದ್ದವು. ಇದೀಗ ಸಾರ್ವಜನಿಕರ ಹಕ್ಕೊತ್ತಾಯಗಳು ಹಾಗೂ ಆಕ್ಷೇಪಣೆಗಳ್ನು ಪರಿಶೀಲಿಸಿದ ಬಳಿಕ ಅಂತಿಮ ಮತದಾರಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ಬಿ.ಸಿ.ಪುರುಷೋತ್ತಮ್ ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲಿ ಈ ವಿಷಯ ತಿಳಿಸಿದ್ದಾರೆ. ಕರಡುಪಟ್ಟಿ ಪ್ರಕಟವಾದ ಬಳಿಕ 1,29,872 ಹೊಸ ಮತದಾರರ ಹೆಸರುಗಳು ಸೇರ್ಪಡೆಯಾಗಿದ್ದರೆ, 1,04,708 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಅವರು ಹೇಳಿದ್ದಾರೆ.
ಕರಡುಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹಕ್ಕೊತ್ತಾಯ(ಕ್ಲೇಮ್) ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಿದವರ ಪೈಕಿ 25,164 ಮಂದಿಯ ಹೆಸರುಗಳನ್ನು ಅಂತಿಮಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಹೀಗೆ ಅಂತಿಮ ಮತದಾರರ ಪಟ್ಟಿಯಲ್ಲಿ 1, 29,872 ಹೊಸ ಮತದಾರರು ಸೇರ್ಪಡೆಯಾಗಿದ್ದರೆ, 1,04,708 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆಯೆಂದು ಪುರುಷೋತ್ತಮ್ ತಿಳಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿಯಲ್ಲಿ 37,37,701 ಪುರುಷರು, 34,21,036 ಮಹಿಳೆಯರು ಹಾಗೂ 212 ತೃತೀಯಲಿಂಗಿ ಮತದಾರರಿದ್ದಾರೆ. 12,45,458 ಮತದಾರರೊಂದಿಗೆ ಹರಿದ್ವಾರವು ಅತ್ಯಧಿಕ ಸಂಖ್ಯೆಯ ಮತದಾರರಿರುವ ಜಿಲ್ಲೆಯೆನಿಸಿದೆ. 11,94,797 ಮತದಾರರೊಂದಿಗೆ ಡೆಹ್ರಾಡೂನ್ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ.

