HEALTH TIPS

ಭಾರತದಲ್ಲಿ CJP ಚಳವಳಿ, ಫ್ರಾನ್ಸ್‌ ಶಾಲಾ ದಂಗೆ: ವ್ಯವಸ್ಥೆ ವಿರುದ್ಧ ಯುವಕರು ಕಿಡಿ

ನವದೆಹಲಿ: ಫ್ರಾನ್ಸ್‌ನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಖಂಡಿಸಿ ನಡೆಸುತ್ತಿರುವ ಬೀದಿ ಹೋರಾಟ ಹಾಗೂ ಭಾರತದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನೇತೃತ್ವದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಸಂವಿಧಾನ, ಮುಕ್ತ ಚುನಾವಣೆ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗಾಗಿ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. 


ಈ ಎರಡೂ ಘಟನೆಗಳು ಜಾಗತಿಕವಾಗಿ ಯುವ ಜನರಲ್ಲಿ ವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ಬಿಂಬಿಸಿವೆ. ಪ್ರದೇಶ ಮತ್ತು ಕಾರಣಗಳು ಬೇರೆಯಾಗಿದ್ದರೂ, ಫ್ರಾನ್ಸ್‌ನ ಶಾಲಾ ದಂಗೆ ಹಾಗೂ ಭಾರತದ ಸಿಜೆಪಿ ಪ್ರತಿಭಟನೆಯ ಸ್ವರೂಪ, ರಾಜಕೀಯ ಪರಿಣಾಮ, ಶೈಕ್ಷಣಿಕ ವ್ಯವಸ್ಥೆಯನ್ನು ಹೋಲಿಸಿ ನೋಡಿದಾಗ ಹಲವು ಕುತೂಹಲಕಾರಿ ಸಾಮ್ಯತೆ ಹಾಗೂ ಭಿನ್ನತೆಗಳು ಗೋಚರಿಸುತ್ತವೆ.

ಏನಿದು ಫ್ರಾನ್ಸ್‌ ಪ್ರೌಢಶಾಲಾ ವಿದ್ಯಾರ್ಥಿಗಳ ದಂಗೆ...?

ಫ್ರಾನ್ಸ್‌ ದೇಶದಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಶಿಕ್ಷಣ ವ್ಯವಸ್ಥೆಯ ಪ್ರಮುಖ ಬೇಡಿಕೆಗಳಿಗೆ ಸೀಮಿತವಾಗದೆ, ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬುಡಮೇಲು ಮಾಡುವ ಹಂತಕ್ಕೆ ತಲುಪಿದೆ. ಶಾಲೆಗಳಿಗೆ ಬೆಂಕಿ ಹಚ್ಚುವುದು, ಪೊಲೀಸರ ಮೇಲೆ ಕಲ್ಲು-ಬಾಟಲಿಗಳನ್ನು ತೂರುವುದು ಹಾಗೂ ಅಶ್ರುವಾಯು ಸಿಡಿಸುವುದು ಫ್ರಾನ್ಸ್‌ನ ಪ್ರಮುಖ ನಗರಗಳಲ್ಲಿ ಸಾಮಾನ್ಯ ದೃಶ್ಯಗಳಾಗಿವೆ. ಶಿಕ್ಷಣ ವ್ಯವಸ್ಥೆಯ ಕೊರತೆಗಳ ವಿರುದ್ಧ ಆರಂಭವಾದ ಈ ವಿದ್ಯಾರ್ಥಿ ಚಳವಳಿ, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯ ರೂಪ ಪಡೆದಿರುವುದು ಫ್ರೆಂಚ್ ಸರ್ಕಾರವನ್ನು ತೀವ್ರ ಆತಂಕಕ್ಕೆ ದೂಡಿದೆ.

ಸೆಪ್ಟೆಂಬರ್‌ನಿಂದ ಭುಗಿಲೆದ್ದ ಆಕ್ರೋಶ...

ಪ್ಯಾರಿಸ್‌ನಲ್ಲಿ ಕಳೆದ ತಿಂಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಚಳವಳಿ ಇಂದು ದೇಶದಾದ್ಯಂತ ಸಾವಿರಾರು ಪ್ರೌಢಶಾಲೆಗಳಿಗೆ ವಿಸ್ತರಿಸಿದೆ. ದೀರ್ಘವಾಗಿರುವ ಶಾಲೆಯ ಅವಧಿ, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಅಭಾವ, ಪಠ್ಯಪುಸ್ತಕಗಳ ಕೊರತೆ, ಬೇಸಿಗೆ ವೇಳೆ ಕೊಠಡಿಗಳಲ್ಲಿ ಅತಿಯಾದ ಕಾವು, ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಮತ್ತು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಫ್ಯಾನ್ಸ್‌ನಲ್ಲಿ ಸುಮಾರು 4 ಸಾವಿರ ಪ್ರೌಢಶಾಲೆಗಳ ಪೈಕಿ 564ಕ್ಕೂ ಹೆಚ್ಚು ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕನಿಷ್ಠ 400 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈವರೆಗೆ 65ಕ್ಕೂ ಹೆಚ್ಚು ಶಾಲಾ ಸಿಬ್ಬಂದಿ, 40 ಪ್ರಾಂಶುಪಾಲರು ಮತ್ತು 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಮುಂದಿನ ಆರು ತಿಂಗಳುಗಳಲ್ಲಿ ಫ್ರಾನ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಈ ವಿದ್ಯಾರ್ಥಿ ಚಳವಳಿಯು ತೀವ್ರ ರಾಜಕೀಯ ಬಣ್ಣ ಪಡೆದುಕೊಂಡಿದೆ. ವಿದ್ಯಾರ್ಥಿಗಳ ನ್ಯಾಯಯುತ ಚಳವಳಿಯನ್ನು ತೀವ್ರವಾದಿಗಳು, ವಿರೋಧ ಪಕ್ಷಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. 100ಕ್ಕೂ ಹೆಚ್ಚು ಶಾಲೆಗಳಿಗೆ ಹಾನಿಯಾಗಿದ್ದು ವಿರೋಧ ಪಕ್ಷ ಎಲ್‌ಎಫ್‌ಐ ವಿದ್ಯಾರ್ಥಿಗಳನ್ನು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದೆ ಎಂದು ಫ್ರಾನ್ಸ್‌ ಸರ್ಕಾರದ ಶಿಕ್ಷಣ ಸಚಿವ ಎಡ್ವರ್ಡ್ ಗೆಫ್ರೆ ಆರೋಪಿಸಿದ್ದಾರೆ.

ಸರ್ಕಾರ ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಎಲ್‌ಎಫ್‌ಐ ಪಕ್ಷದ ಹಿರಿಯ ನಾಯಕ ಮ್ಯಾನುಯೆಲ್ ಬೊಂಪಾರ್ಡ್ ಸರ್ಕಾರದ ವಾದವನ್ನು ತಳ್ಳಿಹಾಕಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಅಪ್ರಾಪ್ತರ ಪೋಷಕರೇ ಆ ನಷ್ಟವನ್ನು ಭರಿಸಬೇಕು ಎಂದು ಸಚಿವ ಜೆರಾಲ್ಡ್ ಕಠಿಣ ಆದೇಶ ಹೊರಡಿಸಿದ್ದಾರೆ. ಇದುವರೆಗೆ ಸುಮಾರು 2000 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇವರಲ್ಲಿ ಶೇ 90ರಷ್ಟು ವಿದ್ಯಾರ್ಥಿಗಳೇ ಆಗಿದ್ದಾರೆ.

ಫ್ರಾನ್ಸ್‌ ಮತ್ತು ಭಾರತ ನಡುವಿನ ಸಾಮ್ಯತೆಗಳು....

1. ಪ್ರತಿಭಟನೆಗೆ ಕಾರಣಗಳು...

ಫ್ರಾನ್ಸ್‌ನಲ್ಲಿ ವಿದ್ಯಾರ್ಥಿ ಚಳವಳಿಗೆ ಶಾಲಾ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳು ಪ್ರಮುಖ ಕಾರಣ. ತರಗತಿಯ ಅವಧಿ ದೀರ್ಘವಾಗಿರುವುದು, ಶಿಕ್ಷಕರ ಅಭಾವ, ಮೂಲಸೌಕರ್ಯಗಳ ಕೊರತೆ ಸೇರಿ ದೈನಂದಿನ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರತದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ರೂಪಿಸಿರುವ ಚಳವಳಿಯು ಶಿಕ್ಷಣ ವ್ಯವಸ್ಥೆಯ ಸುಧಾರಣೆ (ನೀಟ್‌ ಹಗರಣ)ಗಾಗಿ ಆರಂಭವಾದ ಚಳವಳಿ, ಪ್ರಸ್ತುತ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಯ ಸಾಂಸ್ಥಿಕ ವಿಚಾರಗಳ ಸುತ್ತ ಪ್ರತಿಭಟನೆಯ ಕಾವು ವ್ಯಾಪಿಸಿದೆ.

ಎರಡೂ ದೇಶಗಳಲ್ಲಿಯೂ ವ್ಯವಸ್ಥೆಯ ನಿರ್ಲಕ್ಷ್ಯ, ಆಡಳಿತಾತ್ಮಕ ವೈಫಲ್ಯಗಳು ಹಾಗೂ ಯುವ ಸಮುದಾಯದ ಧ್ವನಿಗೆ ಕಿವಿಗೊಡದಿರುವುದು ಯುವಜನರನ್ನು ಬೃಹತ್ ಮಟ್ಟದಲ್ಲಿ ಬೀದಿಗಿಳಿಯುವಂತೆ ಮಾಡಿದೆ.

2. ಹೋರಾಟದ ಸ್ವರೂಪ...

ಫ್ರಾನ್ಸ್‌ನಲ್ಲಿನ ಪ್ರತಿಭಟನೆ ತೀವ್ರ ಸ್ವರೂಪದ ಹಿಂಸಾಚಾರಕ್ಕೆ ತಿರುಗಿದೆ. ಶಾಲೆಗಳಿಗೆ ಬೆಂಕಿ ಹಚ್ಚುವುದು, ಟೈರ್‌ಗಳನ್ನು ಸುಡುವುದು ಹಾಗೂ ಪೊಲೀಸರ ಮೇಲೆ ಕಲ್ಲು-ಬಾಟಲಿಗಳನ್ನು ತೂರುವುದರ ಜೊತೆಗೆ ಶಾಲಾ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ನೇರ ದಾಳಿಗಳು ನಡೆದಿವೆ.

ಭಾರತದಲ್ಲಿ ಸಿಜೆಪಿ ಪ್ರತಿಭಟನೆ (ಉದಾಹರಣೆಗೆ ಮುಂಬೈನ ಶಿವಾಜಿ ಪಾರ್ಕ್, ಬೆಂಗಳೂರಿನ ಫ್ರೀಡಂ ಪಾರ್ಕ್, ದೆಹಲಿಯ ಜಂತರ್ ಮಂತರ್‌ ಸಮಾವೇಶಗಳು) ಬೃಹತ್ ಸಂಖ್ಯೆಯಲ್ಲಿ ಯುವಕರನ್ನು ಸೆಳೆದಿದ್ದರೂ ಒಟ್ಟಾರೆಯಾಗಿ ಸತ್ಯಾಗ್ರಹ ಶಾಂತಿಯುತ ಹಕ್ಕೊತ್ತಾಯದ ಮಾರ್ಗದಲ್ಲೇ ಸಾಗಿವೆ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದು, ಪೊಲೀಸರ ಮೇಲಿನ ದಾಳಿ ಸೇರಿದಂತೆ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಲಕ್ಷಣಗಳು ಕಂಡುಬಂದಿವೆ.

3. ರಾಜಕೀಯ ಆರೋಪ ಮತ್ತು ಪ್ರತ್ಯಾರೋಪ

ಫ್ರಾನ್ಸ್ ಮತ್ತು ಭಾರತ ಸರ್ಕಾರಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳು ಮತ್ತು ಯುವಕರ ಆಂದೋಲನಗಳನ್ನು ನಿರ್ವಹಿಸಿದ ರೀತಿ ಹಾಗೂ ರಾಜಕೀಯ ಆರೋಪ, ಪ್ರತ್ಯಾರೋಪಗಳಲ್ಲಿ ಸಾಮ್ಯತೆ ಇದೆ.

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಪ್ರತಿಭಟನೆ ಹಿಂದೆ ಎಡಪಂಥೀಯ ಎಲ್‌ಎಫ್‌ಐ ಪಕ್ಷದ ಕೈವಾಡವಿದೆ ಎಂದು ಅಲ್ಲಿನ ಸರ್ಕಾರ ಆರೋಪಿಸಿದೆ. ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ ಎಂಬುದು ಫ್ರಾನ್ಸ್‌ ಸರ್ಕಾರದ ವಾದ.

ಭಾರತದಲ್ಲೂ ವಿದ್ಯಾರ್ಥಿಗಳು, ಸಿಜೆಪಿ ಪ್ರತಿಭಟನೆ ನಡೆಸುತ್ತಿರುವುದನ್ನು ಆಡಳಿತಾರೂಢ ಸರ್ಕಾರ ಖಂಡಿಸಿದೆ. ಹರತಾಳ ಮಾಡುವವರನ್ನು 'ಆಂದೋಲನ ಜೀವಿಗಳು' ಎಂದು ಕರೆಯಲಾಗಿದೆ. ಯುವಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡಿದೆ. ಇದನ್ನು ವಿರೋಧ ಪಕ್ಷಗಳು ತಳ್ಳಿಹಾಕಿವೆ.

4. ಸರ್ಕಾರಗಳ ಕಠಿಣ ನಿಲುವು...

ಫ್ರಾನ್ಸ್ ಸರ್ಕಾರವು ಹಿಂಸಾಚಾರದಲ್ಲಿ ಭಾಗಿಯಾದ ಅಪ್ರಾಪ್ತ ವಿದ್ಯಾರ್ಥಿಗಳ ಪೋಷಕರಿಂದಲೇ ಸಾರ್ವಜನಿಕ ಆಸ್ತಿನಷ್ಟದ ಪರಿಹಾರ ವಸೂಲಿ ಮಾಡುವುದಾಗಿ ಕಠಿಣ ಆದೇಶ ಹೊರಡಿಸಿದೆ. ಅಲ್ಲದೆ 2000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಭಾರತದಲ್ಲಿ ರಾಜಧಾನಿ ದೆಹಲಿ ಹಾಗೂ ಮುಂಬೈನಲ್ಲಿ ಅನುಮತಿ ಇಲ್ಲದ ಸಿಜೆಪಿ ಧರಣಿಗಳನ್ನು ತಡೆಯಲು ಪೋಲಿಸರು ನಿಷೇಧಾಜ್ಞೆ, ವಶಕ್ಕೆ ಪಡೆಯುವುದು ಹಾಗೂ ಜಂತರ್ ಮಂತರ್‌ನಂತಹ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದನ್ನು ತಡೆಯಲು ಸರ್ಕಾರ ನಾನಾ ತಂತ್ರಗಳನ್ನು ಬಳಸುತ್ತಿದೆ.

ಫ್ರಾನ್ಸ್‌ನ ಶಾಲಾ ದಂಗೆ ಮತ್ತು ಭಾರತದ ಸಿಜೆಪಿ ಚಳವಳಿಯು ಇಂದಿನ ಯುವ ಪೀಳಿಗೆ, ತಮ್ಮ ಹಕ್ಕುಗಳು, ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾದಾಗ ಮೌನವಾಗಿರುವುದಿಲ್ಲ ಎಂಬ ಸಂದೇಶ ರವಾನಿಸಿದೆ.

ಫ್ರಾನ್ಸ್‌ನಲ್ಲಿ ಹೋರಾಟ ಹಿಂಸೆಗೆ ತಿರುಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಜಾಗತಿಕವಾಗಿ ತಜ್ಞರು ಅಭಿಪ್ರಾಯಪಡುತ್ತಾರೆ. ಭಾರತದಲ್ಲಿ ಶಾಂತಿಯುತ ಮತ್ತು ಸಂವಿಧಾನಾತ್ಮಕ ಚೌಕಟ್ಟಿನಲ್ಲೇ ಪ್ರತಿಭಟನೆ ನಡೆಯುತ್ತಿರುವುದರಿಂದ ಜನಸಾಮಾನ್ಯರು, ಕಲಾವಿದರು ಮತ್ತು ಬುದ್ಧಿಜೀವಿಗಳು ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ. ಅಂತಿಮವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಹೋರಾಟವನ್ನು 'ಕಾನೂನು-ಸುವ್ಯವಸ್ಥೆಯ ಸಮಸ್ಯೆ' ಎಂದು ನೋಡದೆ, ಅವರು ಎತ್ತುತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಸರ್ಕಾರಗಳು ಮುಕ್ತವಾಗಿ ಸ್ಪಂದಿಸುವುದೇ ಈ ಆಂದೋಲನಗಳಿಗೆ ಸಿಗುವ ಶಾಶ್ವತ ಪರಿಹಾರವಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries