ದುಬೈನಿಂದ ರಾಜತಾಂತ್ರಿಕ ಬ್ಯಾಗ್ನಲ್ಲಿ ಚಿನ್ನ ಸಾಗಾಟ; ಕಾಸರಗೋಡಿನ ಚಿನ್ನ ಕಳ್ಳಸಾಗಣೆ ಜಾಲದ ನಂಟಿನ ಬಗ್ಗೆ ತನಿಖೆ
ಕಾಸರಗೋಡು: ಏರ್ ಕಾರ್ಗೋ ಮೂಲಕ ಕಾಸರಗೋಡಿಗೆ ಸಾಗಿಸಲು ಯತ್ನಿಸಲಾಗಿದ್ದ ಸುಮಾರು ₹9 ಕೋಟಿ ಮೌಲ್ಯದ 6.2 ಕೆ.ಜಿ. ಚಿನ್ನವನ್ನು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ನಿವಾಸಿ ಅಮಲ್ರಾಜ್ ಎಂಬಾತನನ್ನು ಬಂಧಿಸಲಾಗಿದೆ.
ತಿರುವನಂತಪುರಂನ ಶಂಖುಮುಖಂನಲ್ಲಿರುವ ಕೇರಳ ಸ್ಟೇಟ್ ಇಂಡಸ್ಟ್ರಿಯಲ್ ಎಂಟರ್ಪ್ರೈಸಸ್ (ಕೆಎಸ್ಐಇ) ನಿಯಂತ್ರಣದ ಏರ್ ಕಾರ್ಗೋ ಮೂಲಕ ಚಿನ್ನವನ್ನು ಕಾಸರಗೋಡಿಗೆ ಸಾಗಿಸಲು ಕಳ್ಳಸಾಗಣೆ ಜಾಲ ಯೋಜನೆ ರೂಪಿಸಿತ್ತು ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಿಂದ ಎಮಿರೇಟ್ಸ್ ವಿಮಾನದ ಮೂಲಕ ಪ್ರಯಾಣಿಕರ ಹೆಸರನ್ನು ನಮೂದಿಸದ ರಾಜತಾಂತ್ರಿಕ ಬ್ಯಾಗ್ನಲ್ಲಿ ಚಿನ್ನವನ್ನು ಬಚ್ಚಿಟ್ಟು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು ಎನ್ನಲಾಗಿದೆ. ಬ್ಯಾಗ್ನ ಒಳಭಾಗದಲ್ಲಿ ಹಾಗೂ ಡೋರ್ ಡೆಲಿವರಿ ವ್ಯವಸ್ಥೆಯ ಮೂಲಕ ಒಟ್ಟು 6.2 ಕೆ.ಜಿ. ಚಿನ್ನವನ್ನು ಸಾಗಿಸಲು ಯತ್ನಿಸಲಾಗಿತ್ತು ಎಂದು ವರದಿಯಾಗಿದೆ.
ಏರ್ ಕಾರ್ಗೋ ಏಜೆಂಟ್ ಸುರೇಂದ್ರನ್ ಮತ್ತು ಕೆಎಸ್ಐಇ ಚಾಲಕನಾಗಿರುವ ಪತ್ತನಂತಿಟ್ಟ ನಿವಾಸಿ ಹೆರಾಲ್ಡ್ ಫಿಲಿಪ್ ಅವರಿಂದ ಚಿನ್ನವಿದ್ದ ಬ್ಯಾಗ್ನ್ನು ಪಡೆದು ಕಾಸರಗೋಡಿಗೆ ಸಾಗಿಸಲು ಅಮಲ್ರಾಜ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ಆತನನ್ನು ಬಂಧಿಸಿದರು.
ಕಾರ್ಗೋಗೆ ಬಂದಿಳಿಯುವ ಬ್ಯಾಗ್ನಿಂದ ಚಿನ್ನವನ್ನು ತೆಗೆದು ಕಳ್ಳಸಾಗಣೆದಾರರಿಗೆ ಹಸ್ತಾಂತರಿಸುವ ಕೆಲಸದಲ್ಲಿ ಸುರೇಂದ್ರನ್ ಮತ್ತು ಹೆರಾಲ್ಡ್ ಫಿಲಿಪ್ ತೊಡಗಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಆದರೆ, ದುಬೈನಿಂದ ಚಿನ್ನವನ್ನು ಕಳುಹಿಸಿದವರು ಯಾರು ಮತ್ತು ಕಾಸರಗೋಡಿನಲ್ಲಿ ಯಾರಿಗೆ ತಲುಪಿಸಲು ಯೋಜಿಸಲಾಗಿತ್ತು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆಯಿದೆ.
ಇದೇ ರೀತಿಯ ಘಟನೆಯೊಂದು 2020ರ ಜೂನ್ 30ರಂದು ನಡೆದಿತ್ತು. ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ರಾಜತಾಂತ್ರಿಕ ಬ್ಯಾಗ್ ಮೂಲಕ 30 ಕೆ.ಜಿ. ಚಿನ್ನವನ್ನು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತಂದು ಇದೇ ಕಾರ್ಗೋ ಮಾರ್ಗವಾಗಿ ಸಾಗಿಸಲು ಯತ್ನಿಸಲಾಗಿತ್ತು ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ಸೂಚನೆ: ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ತನಿಖೆಯಲ್ಲಿದ್ದು, ಸಂಬಂಧಪಟ್ಟವರ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.



