ನವದೆಹಲಿ: ದೆಹಲಿಯಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ ಮೈತ್ರಿಕೂಟದ ರ‍್ಯಾಲಿ ವಿಚಾರವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.
1984ರ ಸಿಖ್ ವಿರೋಧಿ ಗಲಭೆಯ ಸಂತ್ರಸ್ತರ ಗಾಯದ ಮೇಲೆ ಉಪ್ಪು ಸವರಲು ರಾಹುಲ್ ಗಾಂಧಿ ನವೆಂಬರ್ 1ರಂದೇ ರ‍್ಯಾಲಿ ನಡೆಸಲು ಹಠ ಹಿಡಿದಿದ್ದಾರೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ನವೆಂಬರ್ 1ರಂದು ರ‍್ಯಾಲಿ ನಡೆಸುವ ಕಾಂಗ್ರೆಸ್‌ನ ಯೋಜನೆಗೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳು ಸಹಮತ ಹೊಂದಿಲ್ಲ. ಕಾರ್ಯಕ್ರಮದ ದಿನಾಂಕವನ್ನು ಬದಲಾಯಿಸಬೇಕೆಂದು ಅವು ಬಯಸುತ್ತಿವೆ' ಎಂದಿದ್ದಾರೆ.
'ಆದರೆ, ರ್‍ಯಾಲಿ ನಡೆಸಲೇಬೇಕೆಂದು ರಾಹುಲ್ ಗಾಂಧಿ ಹಠ ಹಿಡಿದಿದ್ದು, ಯಾರ ಮಾತನ್ನೂ ಕಿವಿ ಹಾಕುವ ಸ್ಥಿತಿಯಲ್ಲಿಲ್ಲ' ಎಂದು ಹೇಳಿದ್ದಾರೆ.
'ನವೆಂಬರ್ 1ರಂದೇ ರ‍್ಯಾಲಿ ನಡೆಸುವುದಾಗಿ ಪಟ್ಟು ಹಿಡಿಯುವ ಮೂಲಕ ಸಿಖ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಲು ಬಯಸುತ್ತಿದ್ದಾರೆ. ಆ ಮೂಲಕ ಸಿಖ್ ಸಮುದಾಯದೊಂದಿಗೆ ಆಟವಾಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿಖ್ ವಿರೋಧಿ ಗಲಭೆಗಳು ಭುಗಿಲೆದ್ದಿದ್ದವು.
ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟವು ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ನಡೆಸಲು ಉದ್ದೇಶಿಸಿದೆ.



