HEALTH TIPS

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಕೆಲವೇ ಗಂಟೆಗಳಲ್ಲಿ ಸೂರತ್‌ ಗೆ ತಲುಪಿದ ಶಂಕಿತರು!

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದ ತನಿಖೆಯಲ್ಲಿ ಪೊಲೀಸರು ಮಹತ್ವದ ಮುನ್ನಡೆ ಸಾಧಿಸಿದ್ದಾರೆ. ದಾಳಿಯ ಬಳಿಕ ಮಹಾರಾಷ್ಟ್ರ ನೋಂದಣಿಯ ಟ್ಯಾಕ್ಸಿಯಲ್ಲಿ ಗುಜರಾತ್‌ ನ ಸೂರತ್ ತಲುಪಿ, ಅಲ್ಲಿಂದ ರೈಲು ಹತ್ತಿ ಪರಾರಿಯಾಗಲು ಯತ್ನಿಸಿದ್ದ ಮೂವರು ಶಂಕಿತರನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ದಿಲ್ಲಿಗೆ ತೆರಳಿ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಅವರು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ರಾತ್ರಿ ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್‌ಬಾಲ್ ಕ್ಲಬ್‌ ನಿಂದ ಹೊರಬರುತ್ತಿದ್ದ 36 ವರ್ಷದ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಕಾರಿನ ಕಿಟಕಿಗಳ ಮೂಲಕ ಅಭಿಮಾನಿಗಳಿಗೆ ಕೈಬೀಸುತ್ತಿದ್ದ ವೇಳೆ ದಾಳಿ ನಡೆದಿತ್ತು. ನಟ ಪ್ರಾಣಾಪಾಯದಿಂದ ಪಾರಾಗಿದ್ದರೂ, ಅವರ ಕಾರಿನ ಚಾಲಕ ಮತ್ತು ಆಟೋರಿಕ್ಷಾ ಚಾಲಕರೊಬ್ಬರು ಗಾಯಗೊಂಡಿದ್ದರು. ಗುಂಡಿನ ಸಿಡಿತದಿಂದ ಹಾರಿದ ಮದ್ದಿನ ಕಣಗಳು ಹಾಗೂ ಗಾಜಿನ ಚೂರುಗಳಿಂದ ಟೈಗರ್ ಅವರ ಎಡಗೈಗೆ ಗಾಯಗಳಾಗಿವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ :

ಸೂರತ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳ ಪರಾರಿಯ ಹಾದಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ನೆರವಾಗಿವೆ. ನಿಲ್ದಾಣದ ಪ್ರವೇಶ ದ್ವಾರದ ಮೂಲಕ ಒಳಬಂದ ಶಂಕಿತರು, ಪ್ಲಾಟ್‌ಫಾರ್ಮ್‌ ನಲ್ಲಿ ಓಡುತ್ತಾ ಚಲಿಸುತ್ತಿದ್ದ ರೈಲಿನ ಸಾಮಾನ್ಯ ಬೋಗಿಯನ್ನು ಹತ್ತಿರುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ದಾಳಿಯ ಬಳಿಕ ಆರೋಪಿಗಳು ಮುಂಬೈನ ಅಂಧೇರಿ ಪಶ್ಚಿಮ ರೈಲು ನಿಲ್ದಾಣದ ಬಳಿ ತಮ್ಮ ಬೈಕ್ ಬಿಟ್ಟು, ಬೋರಿವಲಿ ಕಡೆಗೆ ತೆರಳುವ ರೈಲನ್ನು ಹತ್ತಿದ್ದರು ಎನ್ನಲಾಗಿದೆ. ಬಳಿಕ ಮಹಾರಾಷ್ಟ್ರ ನೋಂದಣಿಯ ಟ್ಯಾಕ್ಸಿಯಲ್ಲಿ ರಸ್ತೆ ಮಾರ್ಗವಾಗಿ ಸೂರತ್ ತಲುಪಿ, ಅಲ್ಲಿಂದ ರೈಲು ಪ್ರಯಾಣ ಮುಂದುವರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

50 ಸಾವಿರ ರೂ. ಮುಂಗಡ :

ಗುಂಡಿನ ದಾಳಿ ನಡೆಸಲು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 50,000 ರೂ. ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ದಾಳಿಯಲ್ಲಿ ಪ್ರತಿಯೊಬ್ಬರ ಪಾತ್ರವೇನು ಮತ್ತು ಮೂವರೂ ನೇರವಾಗಿ ಗುಂಡು ಹಾರಿಸಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಾಳಿಯ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಎರಡೂ ಕೈಗಳಿಂದ ಬಂದೂಕು ಹಿಡಿದು ಕಾರಿನತ್ತ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಟೋಪಿ ಧರಿಸಿದ್ದ ಮತ್ತೊಬ್ಬ ವ್ಯಕ್ತಿಯೂ ಕಾರಿನ ಪಕ್ಕದಿಂದ ಗುಂಡು ಹಾರಿಸುತ್ತಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮೂರನೇ ವ್ಯಕ್ತಿ ಬೈಕ್‌ ನಲ್ಲಿ ಕಾಯುತ್ತಿದ್ದ ಎನ್ನಲಾಗಿದೆ. ದಾಳಿಯ ಬಳಿಕ ಮೂವರೂ ಬೈಕ್‌ ನಲ್ಲಿ ಪರಾರಿಯಾಗಿದ್ದರು.

ಪುಣೆ-ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಸಿಕ್ಕಿಬಿದ್ದರು :

ಆರೋಪಿಗಳು ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಯತ್ತ ಪ್ರಯಾಣಿಸುತ್ತಿದ್ದಾಗ ಕೋಟಾದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರೈಲು ನಿಲ್ದಾಣದ ನಿರ್ಗಮನ ದ್ವಾರಗಳು, ಪ್ಲಾಟ್‌ಫಾರ್ಮ್‌ ಗಳು ಸೇರಿದಂತೆ ವಿವಿಧೆಡೆ ಪೊಲೀಸರು ನಿಗಾ ಇರಿಸಿದ್ದರು ಎಂದು ಕೋಟಾ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.

'ಆರೋಪಿಗಳು ಈ ರೈಲಿನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಬೆಳಿಗ್ಗೆ 9.45ರ ಸುಮಾರಿಗೆ ಮಾಹಿತಿ ಲಭಿಸಿತು. ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆರೋಪಿಗಳನ್ನು ಅವರಿಗೆ ಹಸ್ತಾಂತರಿಸಲಾಗುವುದು. ಪ್ರಾಥಮಿಕ ವಿಚಾರಣೆಯ ಪ್ರಕಾರ, ಅವರು ದಿಲ್ಲಿಗೆ ತೆರಳಿ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಉದ್ದೇಶಿಸಿದ್ದರು' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳು 'ಸಿಗ್ನಲ್' ಮತ್ತು 'ಟೆಲಿಗ್ರಾಮ್' ಆಯಪ್‌ಗಳ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಹಾಗೂ ತಮ್ಮ ಸ್ಥಳದ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ದಾಳಿಗೆ ಬಳಸಿದ ಬಂದೂಕು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.

ಬಿಷ್ಣೋಯ್ ಗ್ಯಾಂಗ್ ಕೈವಾಡದ ಶಂಕೆ :

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಹೇಳಲಾಗಿದೆ. ಆದರೆ, ಪೋಸ್ಟ್‌ನ ಸತ್ಯಾಸತ್ಯತೆ ಮತ್ತು ಗ್ಯಾಂಗ್‌ನ ಕೈವಾಡದ ಬಗ್ಗೆ ಪೊಲೀಸರು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ಎಂಭತ್ತರ ದಶಕದ ಖ್ಯಾತ ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಅವರ ಮೇಲಿನ ದಾಳಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಏಕನಾಥ್ ಶಿಂಧೆ, ರವಿವಾರ ತಡರಾತ್ರಿ ನಟನನ್ನು ಭೇಟಿಯಾಗಿದ್ದರು. 'ಗುಂಡಿನ ದಾಳಿಗೆ ಗುಂಡಿನ ದಾಳಿಯಲ್ಲೇ ಉತ್ತರಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದ ಅವರು, ಮುಂಬೈನಲ್ಲಿ ಗ್ಯಾಂಗ್‌ ವಾರ್‌ ಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries