# ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ವಾರ್ಷಿಕ ಮಹಾಸಭೆ
ಬದಿಯಡ್ಕ: ನಿರಂತರ ಪರಿಶ್ರಮ, ಶ್ರದ್ಧೆ ಮತ್ತು ಮಾತೃಭಾಷೆಯ ಮೇಲಿನ ಅಭಿಮಾನ ಯಶಸ್ಸಿನ ಪ್ರಮುಖ ಮೆಟ್ಟಿಲುಗಳಾಗಿವೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೇಂದ್ರ ಪಿಲಾಂಕಟ್ಟೆ ಹೇಳಿದರು.
ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ವಾರ್ಷಿಕ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ಮಾತೃಭಾಷೆಯ ಮಹತ್ವವನ್ನು ತಮ್ಮ ಅನುಭವಗಳ ಮೂಲಕ ವಿವರಿಸಿದ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಅಶೋಕ ಎಂ., ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಮಹಾಲಿಂಗೇಶ್ವರ ರಾಜ್ ಡಿ. ಹಾಗೂ ಕೇಂದ್ರ ಸಮಿತಿ ಸದಸ್ಯ ಶರತ್ ಕುಮಾರ್ ಎಂ. ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅಭಿನಂದನೆ, ಪದಾಧಿಕಾರಿಗಳ ಆಯ್ಕೆ:
2025-26ನೇ ಶೈಕ್ಷಣಿಕ ಸಾಲಿನಲ್ಲಿ ಸಿಎಂ ಕಿಡ್ಸ್ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕುಂಬಳೆ ಉಪಜಿಲ್ಲೆಯ ನೂತನ ವಿದ್ಯಾಧಿಕಾರಿ ಅಶೋಕ ಎಂ. ಮತ್ತು ಬಿಪಿಒ ಆಗಿ ನೇಮಕಗೊಂಡ ಶ್ರೀಹರ್ಷ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ದಸರಾ ನಾಡಹಬ್ಬದ ಅಂಗವಾಗಿ ಶಿಕ್ಷಕರಿಗಾಗಿ ಆಯೋಜಿಸಿದ್ದ ನಾಡಗೀತೆ ಹಾಗೂ ಸಮೂಹ ನಾಡಗೀತೆ ಗಾಯನ ಸ್ಪರ್ಧೆಗಳ ವಿಜೇತರಿಗೆ ಸ್ಮರಣಿಕೆ ವಿತರಿಸಲಾಯಿತು. ಶಿಕ್ಷಕ-ಶಿಕ್ಷಕಿಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಸಂಘದ ಅಧ್ಯಕ್ಷರಾಗಿ ಶ್ರೀಹರ್ಷ ಎಂ.ಪಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯಕುಮಾರಿ ಮರು ಆಯ್ಕೆಯಾದರು. ಶೈಲಜಾ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ರಾಜು ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು. ಜ್ಯೋತ್ಸ್ನಾ ಕಡಂದೇಲು ಪ್ರಾರ್ಥಿಸಿದರು. ಶಾಮಲಾ ಮವ್ವಾರು ವಂದಿಸಿದರು.

.jpg)
.jpg)
