ಕಾಸರಗೋಡು: ಸ್ವಚ್ಛ ಭಾರತ್ ಯೋಜನೆಯಡಿ ಕೋಟ್ಯಂತರ ಶೌಚಾಲಯಗಳನ್ನು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕೆ ಆದ್ಯತೆ ನೀಡಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾದ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ವೆಳ್ಳರಿಕ್ಕುಂಡ್ ಮಂಡಲ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಿಯಾ ಸೇನೆಯ ಸದಸ್ಯರು ಮತ್ತು ಬಿಜೆಪಿಯ ಹಿರಿಯ ನಾಯಕರನ್ನು ಗೌರವಿಸುವ ‘ಸ್ನೇಹಾದರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳು ಕುಟುಂಬಗಳಲ್ಲಿ ಲಿಂಗ ತಾರತಮ್ಯ ಕಡಿಮೆ ಮಾಡಲು ಹಾಗೂ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ನೆರವಾಗಿವೆ ಎಂದು ಅವರು ತಿಳಿಸಿದರು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರು, ಮಂಡಲ ಅಧ್ಯಕ್ಷ ವಿನೀತ್ ಮುಂಡಮಾಣಿ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಪ್ರೇಮಲತಾ ಮತ್ತು ಅನಿತಾ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಅನುಶ್ರೀ ಹಾಗೂ ಮಮತಾ ಸಾಗರ್, ವೆಳ್ಳರಿಕ್ಕುಂಡ್ ಮಂಡಲ ಅಧ್ಯಕ್ಷೆ ಆಶಾ, ಬಿಜೆಪಿ ಬಳಾಲ್ ಪಂಚಾಯತ್ ಸಮಿತಿ ಅಧ್ಯಕ್ಷ ಸಾಜನ್ ತುಂಗಾ, ಬಳಾಲ್ ಗ್ರಾಮ ಪಂಚಾಯತ್ ಹಸಿರು ಕ್ರಿಯಾ ಸೇನಾ ಕನ್ಸೋರ್ಟಿಯಂ ಅಧ್ಯಕ್ಷೆ ಜೋಲಿ ಬೇಬಿ ಹಾಗೂ ಕಾರ್ಯದರ್ಶಿ ಶೈನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಸಿರು ಕ್ರಿಯಾ ಸೇನಾ ಕನ್ಸೋರ್ಟಿಯಂನ ಎಲ್ಲ ಸದಸ್ಯರು ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.



