ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ
ಮಂಜೇಶ್ವರ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಡೂರು ಎಸ್‌ಸಿ ಕಾಲನಿಯ ನಿವಾಸಿಗಳ ದೀರ್ಘಕಾಲದ ಕನಸು ನನಸಾಗಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಡಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಯಿತು.
ಬಾಡೂರು ಕಾಲನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.
ಶಾಸಕ ಎಕೆಎಂ ಅಶ್ರಫ್ ಅವರ ಶಿಫಾರಸಿನ ಮೇರೆಗೆ ಬಾಡೂರು ಕಾಲನಿಯನ್ನು ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಯೋಜನೆಯಡಿ ಕಾಲನಿಯ 60 ಪರಿಶಿಷ್ಟ ಜಾತಿ ಕುಟುಂಬಗಳ ಮನೆಗಳ ಪುನರುಜ್ಜೀವನ, ಸಮುದಾಯ ಭವನದ ನವೀಕರಣ ಹಾಗೂ ಸೋಲಾರ್ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರ ವಹಿಸಿಕೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿದಾ ಊಜಂಪದವು ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಪುತ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇ.ಕೆ. ಮುಹಮ್ಮದ್ ಕುಂಞಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಕೀನ ಐ.ಎ. ಮತ್ತು ಅನಿತಾ ಎಂ., ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಬಶೀರ್ ಕೊಟ್ಟೂಡಲ್, ಪಂಚಾಯತ್ ಸದಸ್ಯರಾದ ಬಿ.ಎಂ. ಹಮೀದ್ ಬಾಡೂರು ಹಾಗೂ ಶಿವಪ್ಪ ರೈ ಭಾಗವಹಿಸಿದ್ದರು.
ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮನೋಹರನ್ ಕೆ., ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಶರತ್ ಟಿ.ವಿ., ಹಿರಿಯ ಅಧೀಕ್ಷಕ ತಿರುಮಲೇಶ್ ಪಿ.ಕೆ. ಹಾಗೂ ಯೋಜನಾ ಎಂಜಿನಿಯರ್ ಬಿಂದು ಉಪಸ್ಥಿತರಿದ್ದರು.



