HEALTH TIPS

ಇನ್‌ಸ್ಟಾಗ್ರಾಮ್‌ಗೆ ಲಗ್ಗೆ ಇಟ್ಟ ಸೋನಿಯಾ ಗಾಂಧಿ: 'ಬಿಲಾಂಗಿಂಗ್' ಕುರಿತು ಪೋಸ್ಟ್‌

ನವದೆಹಲಿ:  ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಇನ್‌ಸ್ಟಾಗ್ರಾಮ್‌ ಖಾತೆ ತೆರೆಯುವ ಮೂಲಕ ಸಾಮಾಜಿಕ ಮಾಧ್ಯಮ ಲೋಕಕ್ಕೆ ಕಾಲಿಟ್ಟಿದ್ದಾರೆ.

ಇದೇ ವೇಳೆ ಅವರು ತಮ್ಮ ಆತ್ಮಕಥೆ 'ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌' ಕುರಿತಾದ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. 


ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ಸೂಕ್ತವಾದ ಸ್ಥಾನವನ್ನು ಕಂಡುಕೊಳ್ಳುವ ಕಥೆ' ಎಂದು ಬರೆದುಕೊಂಡಿದ್ದಾರೆ.

ಸೋನಿಯಾ ಗಾಂಧಿ ಅವರು ಪುಸ್ತಕದ ಪ್ರತಿಗಳನ್ನು ಸ್ವೀಕರಿಸುತ್ತಿರುವುದು ಮತ್ತು ತಮ್ಮ ಮಗಳು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಿಹಿ ಹಂಚಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

'ಎಲ್ಲರಿಗೂ ನಮಸ್ಕಾರ, ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'ನ ಮೊದಲ ನೋಟ ಇಲ್ಲಿದೆ' ಎಂದು ಸೋನಿಯಾ ಗಾಂಧಿ ಮೊದಲ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

'ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ಸೂಕ್ತವಾದ ಸ್ಥಾನವನ್ನು ಕಂಡುಕೊಳ್ಳುವ ಕಥೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಈ ಪುಸ್ತಕವು ನವೆಂಬರ್ 10ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದೆ. ಈ ಪುಸ್ತಕವನ್ನು 'ಆಲ್ಫ್ರೆಡ್ ಎ. ನಾಫ್' ಸಂಸ್ಥೆ ಜಾಗತಿಕವಾಗಿ ಪ್ರಕಟಿಸುತ್ತಿದೆ. ಭಾರತದಲ್ಲಿ 'ಹಾರ್ಪರ್‌ ಕಾಲಿನ್ಸ್‌ ಇಂಡಿಯಾ' ಪ್ರಕಟಿಸಲಿದೆ.

ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲೇನಿದೆ?

'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವು ಇಟಲಿಯಿಂದ ಬಂದು ನೆಹರು-ಗಾಂಧಿ ಕುಟುಂಬದ ಭಾಗವಾದ ಸೋನಿಯಾ ಗಾಂಧಿ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಒಡನಾಟ, ಭಾರತೀಯ ಜೀವನಶೈಲಿ ಹಾಗೂ ಸಂಸ್ಕೃತಿಗೆ ಹೊಂದಿಕೊಳ್ಳಲು ಸೋನಿಯಾ ನಡೆಸಿದ ಪ್ರಯತ್ನಗಳ ಬಗ್ಗೆ ವಿವರಿಸುತ್ತದೆ.

ಈ ಪುಸ್ತಕವು ಸೋನಿಯಾ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ ವೈಯಕ್ತಿಕ ದುರಂತಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದರಲ್ಲಿ 1980ರಲ್ಲಿ ವಿಮಾನ ದುರಂತದಲ್ಲಿ ಸಂಭವಿಸಿದ ಸಂಜಯ್ ಗಾಂಧಿ ಸಾವು, 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ಮತ್ತು 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಂತಹ ಘಟನೆಗಳು ಸೇರಿವೆ.

ಅಲ್ಲದೆ, ಕಳೆದ ಆರು ದಶಕಗಳಲ್ಲಿ ಗಾಂಧಿ ಕುಟುಂಬವು ಕಂಡ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆಯೂ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಗೂ ಮುನ್ನ ವಿವಾದ...

'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವು ಭಾರತದಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನವೇ ಗಮನ ಸೆಳೆದಿದೆ.

ಪ್ರಕಾಶಕರು ಸೂಚಿಸಿದ ಸಂಪಾದಕೀಯ ಬದಲಾವಣೆಗಳನ್ನು ಮಾಡಲು ಸೋನಿಯಾ ಅವರು ನಿರಾಕರಿಸಿದ್ದರಿಂದ ಅವರ ಆತ್ಮಕಥೆಯನ್ನು ಭಾರತದಲ್ಲಿ ಪ್ರಕಟಿಸುವ ನಿರ್ಧಾರದಿಂದ 'ಪೆಂಗ್ವಿನ್‌ ರ‍್ಯಾಂಡಮ್ ಹೌಸ್‌ ಇಂಡಿಯಾ' (ಪಿಆರ್‌ಎಚ್‌ಐ) ಹಿಂದೆ ಸರಿದಿತ್ತು. ಇದರಿಂದ ಪುಸ್ತಕ ಬಿಡುಗಡೆ ಕುರಿತ ಅನಿಶ್ಚಿತತೆ ಉಂಟಾಗಿತ್ತು. ಬಳಿಕ 'ಹಾರ್ಪರ್‌ ಕಾಲಿನ್ಸ್‌ ಇಂಡಿಯಾ' ಪುಸ್ತಕ ಪ್ರಕಟಿಸುವುದಾಗಿ ಘೋಷಿಸಿರುವುದರಿಂದ ಅನಿಶ್ಚಿತತೆಗೆ ತೆರೆ ಬಿದ್ದಿದೆ.

'ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಮತ್ತು ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವ ವಿಷಯಗಳಿಗೆ ಸಂಬಂಧಿಸಿದ ಕೆಲ ಭಾಗಗಳನ್ನು ತೆಗೆಯಲು ಸೋನಿಯಾ ಅವರು ಒಪ್ಪದ ಕಾರಣ ಪಿಆರ್‌ಎಚ್‌ಐ ಹಿಂದೆ ಸರಿದಿತ್ತು' ಎಂದು ಮೂಲಗಳು ಹೇಳಿವೆ.

'ಹಾರ್ಪರ್‌ಕಾಲಿನ್ಸ್‌ ಇಂಡಿಯಾ' ಹೇಳಿದ್ದೇನು?

'ಬಹುನಿರೀಕ್ಷಿತ ಈ ಆತ್ಮಕಥೆಯು ಭಾರತದಲ್ಲಿ ಈ ವರ್ಷದ ನವೆಂಬರ್‌ 10ರಂದು ಓದುಗರಿಗೆ ಲಭ್ಯವಾಗಲಿದೆ. ನಮ್ಮ ಕಾಲದ ಅತ್ಯಂತ ಪ್ರಮುಖ ರಾಜಕೀಯ ನಾಯಕರ ಆತ್ಮಕಥೆಗಳಲ್ಲಿ ಇದೂ ಒಂದು. ಪ್ರೀತಿ, ಅಸ್ಮಿತೆ, ಕರ್ತವ್ಯ, ಬಾಂಧವ್ಯದ ಕುರಿತಾದ ಆಳವಾದ ಜೀವನಚರಿತ್ರೆ ಇದಾಗಿದೆ. ಭಾರತದ ಪಯಣದ ಕುರಿತು ಅಪರೂಪದ ಒಳನೋಟಗಳನ್ನು ಇದು ಒದಗಿಸುತ್ತದೆ' ಎಂದು 'ಹಾರ್ಪರ್‌ಕಾಲಿನ್ಸ್‌ ಇಂಡಿಯಾ' ಪ್ರಕಟಣೆಯಲ್ಲಿ ತಿಳಿಸಿದೆ.

ಸೋನಿಯಾ ಅವರ ಪುಸ್ತಕವು 544 ಪುಟಗಳನ್ನು ಹೊಂದಿದ್ದು, ವೈಯಕ್ತಿಕ ಮತ್ತು ರಾಜಕೀಯ ವಿಷಯಗಳ ಜತೆಗೆ ಪ್ರೀತಿ, ಕುಟುಂಬ ಮತ್ತು ಭಾರತದ ಕುರಿತಾದ ರೋಚಕ ಕಥೆಯನ್ನು ಹೇಳುತ್ತದೆ ಎಂದು ಅದು ವಿವರಿಸಿದೆ.

ಸ್ವಾತಂತ್ರ್ಯ ನಂತರ ಭಾರತದ ಇತಿಹಾಸ, ಪ್ರಸ್ತುತ ರಾಜಕೀಯ ಹೋರಾಟಗಳು, 60 ವರ್ಷಗಳಲ್ಲಿ ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗಳ ಬಗ್ಗೆ ತೀಕ್ಷ್ಣ ದೃಷ್ಟಿಕೋನವನ್ನು ಪುಸ್ತಕ ನೀಡುತ್ತದೆ ಎಂದು ಅದು ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries