HEALTH TIPS

ʼವೋಟ್ ಚೋರಿʼ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ, ಇದಕ್ಕೆ ಪ್ರಧಾನಿ ಮೋದಿ-ಅಮಿತ್ ಶಾ ಉತ್ತರಿಸಬೇಕು : ಧ್ರುವ ರಾಠಿ

ಬೆಂಗಳೂರು : ದೇಶದಲ್ಲಿ ಮತಗಳ್ಳತನ ನಡೆದಿದೆ ಎಂದು ಹೇಳಲು ಮೂರು ಸಾಕ್ಷ್ಯಗಳಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇದಕ್ಕೆ ಉತ್ತರಿಸಬೇಕು. ಆದರೆ, ಇಂತಹ ಸಂವಿಧಾನ ವಿರೋಧಿ ಕೃತ್ಯಗಳಿಂದ ಪ್ರತಿಯೊಬ್ಬ ಭಾರತೀಯನ ಮತ್ತು ಸ್ವತಃ ಬಿಜೆಪಿ ಬೆಂಬಲಿಗರ ಮೇಲೂ ಪರಿಣಾಮ ಬೀರಲಿದೆ ಎಂದು ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಹೇಳಿದ್ದಾರೆ. 


ಗುರುವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಸಿಜೆಪಿ ಪಕ್ಷ, ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಅನ್ಯಾಯ ಮತ್ತು ಮತದಾರರ ಹಕ್ಕುಗಳ ಮೇಲಿನ ಪರಿಣಾಮಗಳ ವಿರುದ್ಧ 'ಜನತಾ ನ್ಯಾಯಾಲಯ' ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಪಟ್ಟಿಯಲ್ಲಿದ್ದ ಸುಮಾರು 70 ಲಕ್ಷ ಜನರ ಹೆಸರುಗಳನ್ನು ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಲಾಯಿತು. ಬಳಿಕ ಚುನಾವಣೆ ಮುಗಿದ ನಂತರ ಮತ್ತೆ ಸೇರಿಸಲಾಯಿತು. ಎರಡನೆಯದಾಗಿ, ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಯಿತು. ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡುವವರೆಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಮೂರನೆಯದಾಗಿ, ಲಕ್ಷಾಂತರ ಹೊಸ ಹೆಸರುಗಳನ್ನು ಅನಾಮಧೇಯವಾಗಿ ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರ ಹೆಸರುಗಳನ್ನು ಸೇರಿಸಲಾಗಿದೆ ಎಂಬುದರ ವಿವರಗಳನ್ನೆ ಬಹಿರಂಗಪಡಿಸಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಗೋವಾದಲ್ಲಿ ಸಣ್ಣಮಟ್ಟದ ಹೆಸರಿನ ತಿದ್ದುಪಡಿಯನ್ನು ಸರಿಯಾಗಿ ಮಾಡಲು ಸಹ ಸಹಾಯಕ ಚುನಾವಣಾಧಿಕಾರಿಗೆ ಸಾಧ್ಯವಾಗಿಲ್ಲ, ಆಯೋಗ ತನಗೆ ತೋಚಿದಂತೆ ನಡೆದುಕೊಳ್ಳುತ್ತಿದೆ. ಇನ್ನೊಂದೆಡೆ ಮತದಾರರ ಪಟ್ಟಿಯಿಂದ ಜ್ಞಾನೇಶ್ ಕುಮಾರ್ ಅವರ ಆಡಳಿತಾವಧಿಯಲ್ಲಿ ಜೀವಂತವಿರುವ ಜನರನ್ನೇ 'ಮೃತಪಟ್ಟಿದ್ದಾರೆ' ಎಂದು ಘೋಷಿಸಿ ಹಕ್ಕು ಕಸಿಯಲಾಗಿದೆ. ಅಂತಹ ಸಂತ್ರಸ್ತರು ಸಹ ಈ ಸಭೆಗೆ ಬಂದಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಮತದಾರರ ಜಾಗೃತಿಗಾಗಿ ಪ್ರತಿಯೊಂದು ಜಿಲ್ಲೆಗೂ ಪ್ರವಾಸ ಮಾಡಿ ಜನರನ್ನು ಸಂಘಟಿಸಿದ ಕರ್ನಾಟಕದ ವಿವಿಧ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಇಲ್ಲಿ ಒಗೂಡಿರುವ ಜನರಿಗಿಂತ ದೊಡ್ಡ ದೇಶಭಕ್ತರು ಬೇರಾರೂ ಇಲ್ಲ. ಜ್ಞಾನೇಶ್ ಕುಮಾರ್ ಅವರಂತಹ ಅಧಿಕಾರಿಗಳು ಮಾಡುತ್ತಿರುವ ತಪ್ಪುಗಳನ್ನು ಮತ್ತು ಅಕ್ರಮಗಳನ್ನು ಬೆಂಬಲಿಸಲು ಅಥವಾ ರಕ್ಷಿಸಲು ಯಾರು ಪ್ರಯತ್ನಿಸುತ್ತಾರೋ ಅವರಿಗಿಂತ ದೊಡ್ಡ ದೇಶದ್ರೋಹಿಗಳು ಬೇರಾರೂ ಇರಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ನಡೆಯುತ್ತಿರುವ ಮತ ಕಳವು ಅಥವಾ ಚುನಾವಣಾ ಅಕ್ರಮಗಳು ಪ್ರತಿಯೊಬ್ಬ ನಾಗರಿಕನ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಇದು ಕೇವಲ ವಿರೋಧ ಪಕ್ಷಗಳ ವಿಷಯವಲ್ಲ, ಪ್ರತಿಯೊಬ್ಬ ಭಾರತೀಯನ ಮತ್ತು ಸ್ವತಃ ಬಿಜೆಪಿ ಬೆಂಬಲಿಗರ ಮೇಲೂ ಪರಿಣಾಮ ಬೀರುವ ವಿಷಯವಾಗಿದೆ. ಬಿಜೆಪಿ ಬೆಂಬಲಿಗರು ಕೂಡ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಧ್ರುವರಾಠಿ ಕರೆ ನೀಡಿದರು.

ತಮ್ಮ ಹುಟ್ಟುಹಬ್ಬ ದಿನದಂದೇ ಧ್ರುವರಾಠಿ ಅವರು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ವೇಳೆ ʼಮತ ಕದಿಯುವವರೇ ಅಧಿಕಾರ ಬಿಟ್ಟು ತೊಲಗಿʼ ಮತ್ತು 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

'ನನಗೆ ಎಲಾನ್ ಮಾಸ್ಕ್ ಹಣ ಕೊಟ್ಟಿಲ್ಲ'

ನಾನು ಯಾವುದೇ ಸರಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ ಶ್ರೀಮಂತ ಉದ್ಯಮಿಗಳಾದ ಎಲಾನ್ ಮಸ್ಕ್ ಅಥವಾ ಜಾರ್ಜ್ ಸೊರೊಸ್ ಹಣವನ್ನೂ ನೀಡಿಲ್ಲ. ದೇಶದ ಒಬ್ಬ ಸಾಮಾನ್ಯ ನಾಗರಿಕನಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಲು ಬಂದಿದ್ದೇನೆ ಎಂದು ಧ್ರುವರಾಠಿ ಸ್ಪಷ್ಟನೆ ನೀಡಿದರು. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries