ಕಾಸರಗೋಡು: ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ಇಲಾಖಾವಾರು ಪರಿಶೀಲನಾ ಸಭೆ ನಡೆಯಿತು.
ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದ ಮೇರೆಗೆ ಬಾಲನ್ಯಾಯ, ಪೋಕ್ಸೊ ಮತ್ತು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಆಯೋಗದ ಸದಸ್ಯ ಬಿ. ಮೋಹನ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸುವಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಬಲ್ಲವು. ಆದ್ದರಿಂದ ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಬಿ. ಮೋಹನ್ ಕುಮಾರ್ ಹೇಳಿದರು. ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಬಲಪಡಿಸಲು ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸುವಂತೆಯೂ ಸೂಚಿಸಿದರು.
ಕಾನೂನುಗಳು ಹಕ್ಕುಗಳ ಜತೆಗೆ ಜವಾಬ್ದಾರಿಗಳನ್ನೂ ಒಳಗೊಂಡಿವೆ. ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಡೆಯುವ ‘ಚಿರಿ’ ಮತ್ತು ‘ಹೋಪ್’ನಂತಹ ಮಾನಸಿಕ ಆರೋಗ್ಯ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಎಲ್ಲ ಮಕ್ಕಳಿಗೂ ತಲುಪಿಸುವ ಅಗತ್ಯವಿದೆ ಎಂದು ಆಯೋಗದ ಸದಸ್ಯ ಕೆ.ಕೆ. ಶಾಜು ಅಭಿಪ್ರಾಯಪಟ್ಟರು.
ಎರಡು ಅಧಿವೇಶನಗಳಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಕಲ್ಯಾಣ, ರಕ್ಷಣೆ, ಸುರಕ್ಷತೆ ಮತ್ತು ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲಾಯಿತು. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವಾಗ ಎದುರಾಗುವ ಪ್ರಾಯೋಗಿಕ ತೊಂದರೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆಯೂ ಚರ್ಚಿಸಲಾಯಿತು.
ನವಜಾತ ಶಿಶುಗಳಲ್ಲಿನ ಅಂಗವೈಕಲ್ಯ ಪತ್ತೆಗೆ ಕ್ರಮ
ನವಜಾತ ಶಿಶುಗಳಲ್ಲಿನ ಅಂಗವೈಕಲ್ಯಗಳನ್ನು ಆರಂಭದಲ್ಲೇ ಗುರುತಿಸಲು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿರುವ ಡಿಐಸಿ ಕೇಂದ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಲಸಿಕೆ ಪಡೆಯಲು ಹಿಂಜರಿಯುವ ಪೋಷಕರಲ್ಲಿ ಜಾಗೃತಿ ಮೂಡಿಸಲು ಮಾಸ್ ಮೀಡಿಯಾ ಅಧಿಕಾರಿಗಳು ತರಗತಿಗಳನ್ನು ನಡೆಸುತ್ತಿದ್ದಾರೆ ಎಂದರು.
ಕಲಿಕಾ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗಾಗಿ ಥೆರಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಶಾಲೆ ತೊರೆಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಲಿಂಗ ಸಮಾನತೆಯನ್ನು ಖಚಿತಪಡಿಸಲು ಜೆಂಡರ್ ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಎಸ್‌ಎಸ್‌ಕೆ ಸಂಯೋಜಕರು ವಿವರಿಸಿದರು.
ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುವ ಮಕ್ಕಳಿಗೆ ಸೌಲಭ್ಯಗಳ ಕೊರತೆ
ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸೂಕ್ತ ಆರೈಕೆ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಇಂತಹ ಮಕ್ಕಳಿಗಾಗಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ಜಿಲ್ಲೆಯಲ್ಲಿ ಪ್ರಸ್ತುತ ಮಾದಕ ವ್ಯಸನಮುಕ್ತಿ ಕೇಂದ್ರ ಇಲ್ಲದಿರುವ ವಿಷಯವನ್ನು ಜಿಲ್ಲಾ ಪಂಚಾಯತ್‌ನೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು. ಸಹಜೀವನ ಸ್ನೇಹ ಗ್ರಾಮದಲ್ಲಿ ವಿಶೇಷಚೇತನ ಮಕ್ಕಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ತ್ವರಿತಗೊಳಿಸುವಂತೆಯೂ ಸೂಚಿಸಲಾಯಿತು.
ಪೋಕ್ಸೊ ಪ್ರಕರಣಗಳಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಕೆಲವು ಪೋಷಕರು ಆಸಕ್ತಿ ತೋರಿಸುತ್ತಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕುಟುಂಬಗಳಲ್ಲಿನ ಸಮಸ್ಯೆಗಳು ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಚೈಲ್ಡ್‌ಲೈನ್ ಪ್ರತಿನಿಧಿ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಉಪ ಜಿಲ್ಲಾಧಿಕಾರಿ ಬಿ.ಸಿ. ಬಿಜೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಡ್ವ. ರೇಣುಕಾದೇವಿ ತಂಕಚ್ಚಿ, ಜುವೆನೈಲ್ ಜಸ್ಟಿಸ್ ಬೋರ್ಡ್ ಸದಸ್ಯ ಅಡ್ವ. ಎ. ಶ್ರೀಜಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.



