ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ, ಅದಕ್ಕೆ ಪ್ರತಿಯಾಗಿ 'ಲಾಲ್ ಹಿಟ್ ಜನತಾ ಪಾರ್ಟಿ' ಎಂಬ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.
ರವಿವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಭೆಯಲ್ಲಿ ಸಂವಿಧಾನದ ಮೌಲ್ಯಗಳು, ಹೊಣೆಗಾರಿಕೆ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಭಾಗವಹಿಸುವಿಕೆಗೆ ಸಂಘಟನೆ ಒತ್ತು ನೀಡಿದೆ. ಸಿಜೆಪಿಯ ಪ್ರತಿಭಟನೆಗಳಿಗೆ ತನ್ನ ವಿರೋಧವನ್ನೂ ವ್ಯಕ್ತಪಡಿಸಿದೆ.
Gen Z ಯುವಕರು ಶಾಂತಿಯುತ ಪ್ರತಿಭಟನೆ, ವಾಸ್ತವಾಂಶ ಆಧಾರಿತ ಸಂವಹನ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟನೆ ಕರೆ ನೀಡಿದೆ. 'ದೇಶ ಮೊದಲು, ಸಂವಿಧಾನಕ್ಕೆ ಗೌರವ, ಪ್ರಜಾಪ್ರಭುತ್ವವೇ ನಮ್ಮ ಗುರುತು' ಎಂಬುದು ಸಂಘಟನೆಯ ಧ್ಯೇಯವಾಕ್ಯವಾಗಿದೆ.
ಪಿಟಿಐ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಮಾಳವೀಯ ಸ್ಮೃತಿ ಭವನದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಸಂಚಾಲಕ ಅಯಾನ್ ಭಟ್ನಾಗರ್ ಹಾಗೂ ಚಿತ್ರನಿರ್ಮಾಪಕರಾದ ರಿಚಾ ಗುಪ್ತಾ, ಪವನ್ ನಾಗಪಾಲ್ ಮತ್ತು ಅತುಲ್ ಗಂಗ್ವಾರ್ ಮಾತನಾಡಿದರು.
ಸಂಘಟನೆಯ ಹೆಸರಿನಲ್ಲಿ ಜನಪ್ರಿಯ ಕೀಟನಾಶಕ ಬ್ರ್ಯಾಂಡ್ನ ಉಲ್ಲೇಖವಿದ್ದು, ಇದು ಸಿಜೆಪಿಯ ವಿರುದ್ಧವಾಗಿಯೇ ಅಸ್ತಿತ್ವಕ್ಕೆ ಬಂದಿದೆ ಎನ್ನಲಾಗಿದೆ.
ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಭಟ್ನಾಗರ್, ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಂಘಟನೆಯನ್ನು ಸ್ಥಾಪಿಸಿಲ್ಲ ಎಂದು ಹೇಳಿದ್ದಾರೆ.
"ಲಾಲ್ ಹಿಟ್ ಜನತಾ ಪಾರ್ಟಿʼಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಥಾಪಿಸಿಲ್ಲ ಎಂಬುದನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಾವು ಸಿಜೆಪಿ ಮತ್ತು ಅದರ ಪ್ರತಿಭಟನೆಗಳನ್ನು ವಿರೋಧಿಸುತ್ತೇವೆ. ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಮತ್ತು ಅರಾಜಕತೆ ಸೃಷ್ಟಿಸಲು ಬಯಸುವ ಕಾಕ್ರೋಚ್ಗಳನ್ನು ನಾವು ವಿರೋಧಿಸುತ್ತೇವೆ" ಎಂದು ಹೇಳಿದ್ದರು.
"ನಾವು ಸಭೆ ಸೇರಿ ನಮ್ಮ ಅಭಿಪ್ರಾಯ ಹಾಗೂ ವಾದಗಳನ್ನು ಮಂಡಿಸುತ್ತೇವೆ. ನಮ್ಮ ಸಂದೇಶವನ್ನು ಜನರಿಗೆ ತಲುಪಿಸುತ್ತೇವೆ. ಸಿಜೆಪಿಗೆ ಸವಾಲೊಡ್ಡಲು 'ಲಾಲ್ ಹಿಟ್ ಜನತಾ ಪಾರ್ಟಿ' ಎಂಬ ಸಂಘಟನೆಯೂ ಇದೆ ಎಂಬುದನ್ನು ತೋರಿಸುತ್ತೇವೆ. ಧೈರ್ಯವಿದ್ದರೆ ಬಂದು ಚರ್ಚಿಸಿ" ಎಂದು ಅವರು ಸವಾಲು ಹಾಕಿದ್ದರು.
ಚುನಾವಣಾ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಇಸಿ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.



