ಇಂಫಾಲ: ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಭಾಗದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು, ಮನೆಗಳಿಂದ ಹೊರಗೆ ಬಾರದಂತೆ ನಿವಾಸಿಗಳಿಗೆ ನಿರ್ಬಂಧ ವಿಧಿಸಿದೆ.
ಈ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಕೆಲವು ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ರವಿವಾರ ರಾತ್ರಿ ಇಂಫಾಲದಿಂದ ಸುಮಾರು 25 ಕಿಮೀ ದೂರವಿರುವ, ತೌಬಲ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಂಗಬೋಕ್ ಗ್ರಾಮದ ಮೈದಾನದಲ್ಲಿ ನಡೆಯುತ್ತಿದ್ದ ಸಂಗೀತ ಗೋಷ್ಠಿಯ ಮೇಲೆ ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಆ ಬಳಿಕ ಖಾಂಗಬೋಕ್ ಮತ್ತು ಸಂಗೈಯುಂಫಂ ಗ್ರಾಮಗಳ ಎರಡು ಸಮುದಾಯದ ಜನರ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಈ ವೇಳೆ ಕೆಲವು ಮನೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಈ ಘರ್ಷಣೆಯ ವೇಳೆ ದುಷ್ಕರ್ಮಿಯೋರ್ವ ಗುಂಡು ಹಾರಿಸಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಲೈಶ್ರಾಮ್ ರಾಕೇಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘರ್ಷಣೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎರಡೂ ಗ್ರಾಮಗಳಿಗೆ ಹೆಚ್ಚುವರಿ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ರವಾನಿಸಲಾಗಿದೆ. ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.



