ನವದೆಹಲಿ: 'ಮತ ಕಳ್ಳತನ' ವಿಷಯ ಪ್ರಸ್ತಾಪಿಸಲು ಸೋಮವಾರ ಭೇಟಿಗೆ ಸಮಯ ಕೋರಿ ವಿರೋಧ ಪಕ್ಷಗಳ ನಾಯಕರು ಪತ್ರ ಬರೆದಿದ್ದರೂ, ಅವರನ್ನು ಭೇಟಿಯಾಗಲು ಸಿಜೆಐ ಸೂರ್ಯಕಾಂತ್ ಅವರು ಒಪ್ಪಿಲ್ಲ ಎಂದು ಮೂಲಗಳು ಭಾನುವಾರ ರಾತ್ರಿ ತಿಳಿಸಿವೆ.
'ಮತ ಕಳ್ಳತನ'ದ ಆರೋಪಗಳಿಗೆ ಸಂಬಂಧಿಸಿದ ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಹೇಳುವ ಮೂಲಕ ಸಿಜೆಐ ಅವರು ಭೇಟಿಗೆ ನಿರಾಕರಿಸಿದ್ದಾರೆ ಎಂದು ಹೇಳಿವೆ.
'ಭೇಟಿಗಾಗಿ ರಾಹುಲ್ ಗಾಂಧಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ, ಆಡಳಿತಾತ್ಮಕ ವಿಭಾಗದ ಅಡಿಯಲ್ಲಿ ಯಾವುದೇ ಆದೇಶಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬದಲಾಗಿ, ಅರ್ಜಿಯನ್ನು ಸಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದು, ಅಂತಹ ಅರ್ಜಿಯನ್ನು ಮಂಗಳವಾರ ಪರಿಗಣನೆಗೆ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ' ಎಂದು ಮೂಲಗಳು ತಿಳಿಸಿವೆ.
'ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅವರ ಅಹವಾಲು ಆಲಿಸಲು ಸುಪ್ರೀಂ ಕೋರ್ಟ್ ಅವರಿಗೆ ದಿನದ 24 ಗಂಟೆಯೂ ಲಭ್ಯವಿರುತ್ತದೆ. ಅಲ್ಲದೆ, ಕಾರ್ಯಾಂಗದ ಆಡಳಿತಾತ್ಮಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ' ಎಂದು ಹೇಳಿವೆ.



