ವಾಶಿಂಗ್ಟನ್: ಇರಾನ್ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಯುದ್ಧದಿಂದಾಗಿ ತೈಲ, ಡೀಸೆಲ್ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆಗಳು ಏರಿಕೆಯಾಗಿವೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸಲು ಯುದ್ಧದ ಬದಲಾಗಿ ರಾಜತಾಂತ್ರಿಕ ಮಾತುಕತೆಗಳೇ ಪರಿಣಾಮಕಾರಿ ಮಾರ್ಗವಾಗಿದ್ದವು ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ಓಹಿಯೊದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಒಬಾಮಾ, ತಮ್ಮ ಆಡಳಿತದ ಅವಧಿಯಲ್ಲಿ ಇರಾನ್ ನೊಂದಿಗೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು ಪ್ರಸ್ತಾಪಿಸಿದರು.
'ನಾನು ಜಾರಿಗೆ ತಂದಿದ್ದ ಒಪ್ಪಂದದಿಂದಾಗಿ ಇರಾನ್ ಬಳಿ ಪರಮಾಣು ಅಸ್ತ್ರಗಳಿರಲಿಲ್ಲ. ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದುವುದನ್ನು ಈ ಒಪ್ಪಂದ ತಡೆಯುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಇದಕ್ಕಾಗಿ ನಾನು ಯಾವುದೇ ಕ್ಷಿಪಣಿಯನ್ನು ಹಾರಿಸಬೇಕಾಗಿರಲಿಲ್ಲ. ಕೇವಲ ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಅದನ್ನು ಸಾಧಿಸಿದ್ದೆ' ಎಂದು ಅವರು ಹೇಳಿದರು.
ಹಾರ್ಮುಝ್ ಜಲಸಂಧಿಯ ಮೇಲೆ ಇರಾನ್ ನ ಹಿಡಿತ
'ಹಾರ್ಮುಝ್ ಜಲಸಂಧಿಯ ಮೇಲೆ ಈಗ ಇರಾನ್ ಗೆ ನಿರ್ಣಾಯಕ ನಿಯಂತ್ರಣ (ವೀಟೊ ಅಧಿಕಾರ) ಸಿಕ್ಕಿದೆ. ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗುವ ತೈಲದ ಬಹುಪಾಲು ಇದೇ ಮಾರ್ಗದ ಮೂಲಕ ಸಾಗುತ್ತದೆ' ಎಂದು ಒಬಾಮಾ ತಿಳಿಸಿದರು.
'ತೈಲದ ಬೆಲೆ ಏರಿಕೆಗೆ ಇದೇ ಕಾರಣ. ಡೀಸೆಲ್ ಬೆಲೆ ಹೆಚ್ಚಳಕ್ಕೂ ಇದೇ ಕಾರಣ. ಹೀಗೆ, ಬಹುತೇಕ ಎಲ್ಲ ವಸ್ತುಗಳ ಬೆಲೆಗಳು ಏರಿಕೆಯಾಗಲು ಇದೇ ಕಾರಣವಾಗಿದೆ' ಎಂದು ಅವರು ಹೇಳಿದರು.
2015ರಲ್ಲಿ ಒಪ್ಪಂದ; 2018ರಲ್ಲಿ ಟ್ರಂಪ್ ನಿರ್ಗಮನ
2015ರಲ್ಲಿ ಒಬಾಮಾ ಆಡಳಿತವು ಇರಾನ್ ನೊಂದಿಗೆ ಪರಮಾಣು ಒಪ್ಪಂದ ಮಾಡಿಕೊಂಡಿತ್ತು. ಇದನ್ನು 'ಜಾಯಿಂಟ್ ಕಾಂಪ್ರಹೆನ್ಸಿವ್ ಪ್ಲಾನ್ ಆಫ್ ಆಕ್ಷನ್' (JCPOA) ಎಂದು ಕರೆಯಲಾಗುತ್ತದೆ.
ಈ ಒಪ್ಪಂದದ ಪ್ರಕಾರ, ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದಕ್ಕೆ ಪ್ರತಿಯಾಗಿ ಯುರೇನಿಯಂ ಪುಷ್ಟೀಕರಣವನ್ನು ಮಿತಿಗೊಳಿಸಲು ಮತ್ತು ಅಂತರರಾಷ್ಟ್ರೀಯ ಪರಿಶೀಲನೆಗಳಿಗೆ ಒಳಪಡಲು ಇರಾನ್ ಒಪ್ಪಿಕೊಂಡಿತ್ತು. ಆದರೆ, ಟ್ರಂಪ್ ಅವರು ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ 2018ರಲ್ಲಿ ಈ ಒಪ್ಪಂದದಿಂದ ಅಮೆರಿಕವನ್ನು ಹೊರಗೆ ತಂದಿದ್ದರು.



