ಟೆಹರಾನ್: ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಭವನೀಯ ಯುದ್ಧದ ಮರು ಆರಂಭವು ತಮ್ಮ ದೇಶದ ನಿಲುವುಗಳನ್ನು ಬದಲಾಯಿಸುವುದಿಲ್ಲ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ರವಿವಾರ ಹೇಳಿದ್ದಾರೆ.
ಫೆಬ್ರವರಿ 28 ರಂದು ಪ್ರಾರಂಭವಾದ ಇರಾನ್ ಮೇಲಿನ ಅಮೆರಿಕ-ಇಸ್ರೇಲಿ ಯುದ್ದವನ್ನು ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು `ಅಮೆರಿಕ ಮತ್ತೊಂದು ಸಣ್ಣ ಮಿಲಿಟರಿ ಕಾರ್ಯಾಚರಣೆ ನಡೆಸಬಹುದು' ಎಂದು ಶುಕ್ರವಾರ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವರು `ಇತ್ತೀಚೆಗೆ ಹೊಸ ಯುದ್ಧದ ಬಗ್ಗೆ ಮಾತುಗಳು ಕೇಳಿಬರುತ್ತಿವೆ, ಆದರೆ ನಾನು ಈಗಾಗಲೇ ಯುದ್ಧದ ನಂತರದ ಅವಧಿಯ ಬಗ್ಗೆ ಯೋಚಿಸುತ್ತಿದ್ದೇನೆ.
ಯುದ್ಧವಿರಲಿ ಅಥವಾ ಇಲ್ಲದಿರಲಿ, ನಮ್ಮ ನೀತಿಗಳು ಒಂದೇ ಆಗಿರುತ್ತವೆ' ಎಂದು ಟೆಹರಾನ್‍ನಲ್ಲಿ ನಡೆದ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಅವರು ಈಗಾಗಲೇ ಎರಡು ಬಾರಿ ಹಾಗೆ ಮಾಡಿದ್ದಾರೆ ಮತ್ತು ಅದರ ಫಲಿತಾಂಶಗಳನ್ನು ನೋಡಿದ್ದಾರೆ. ಅವರು ಮತ್ತೆ ಪ್ರಯತ್ನಿಸಲು ಬಯಸಿದರೆ, ಅವರು ಗತಕಾಲದ ಫಲಿತಾಂಶಗಳಿಗಿಂತ ಭಿನ್ನವಾದದ್ದನ್ನೇನೂ ಸಾಧಿಸುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು, ನಮ್ಮ ಪ್ರದೇಶವು ವಿದೇಶಿ ಪಡೆಗಳ ಸಂಪೂರ್ಣ ಗೈರು ಹಾಜರಿಯತ್ತ ಸಾಗಬೇಕು ಎಂದು ಅರಾಘ್ಚಿ ಹೇಳಿರುವುದಾಗಿ ವರದಿಯಾಗಿದೆ.



