ಸನಾ: ಯೆಮನ್ ನಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಹೌತಿ ಮಿಲಿಟಿಯಾ ಸೌದಿ ಅರೇಬಿಯಾ ವಿರುದ್ಧ ಪ್ರಚಾರ ಯುದ್ಧವನ್ನು ತೀವ್ರಗೊಳಿಸಿದೆ. ಮೃತ ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ಫೈಲ್ ಗಳಲ್ಲಿನ ಮಾಹಿತಿಯನ್ನು ಬಳಸಿಕೊಂಡು, ಸೌದಿ ಅರೇಬಿಯಾದ ನಾಯಕತ್ವದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲು ಹೌತಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕಾಬಾದ ಹೊದಿಕೆ, ಎಪ್ಸ್ಟೀನ್ ದ್ವೀಪದ ವಿವಾದ
ಸೌದಿ ರಾಜಮನೆತನದ ಆಪ್ತರು ಮಕ್ಕಾದಲ್ಲಿರುವ ಇಸ್ಲಾಂ ಧರ್ಮದ ಪವಿತ್ರ ಸ್ಥಳ ಕಾಬಾವನ್ನು ಹೊದಿಸುವ ವಸ್ತ್ರಗಳನ್ನು ಎಪ್ಸ್ಟೀನ್ ನ ಖಾಸಗಿ ದ್ವೀಪಕ್ಕೆ ಕಳುಹಿಸಿದ್ದಾರೆ ಎಂಬ ವರದಿಗಳನ್ನು ಹೌತಿಗಳು ತಮ್ಮ ಪ್ರಚಾರದ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆ. ಇಸ್ಲಾಂ ಧರ್ಮದ ಜನ್ಮಸ್ಥಳವೆಂಬ ಹೆಗ್ಗಳಿಕೆ ಹೊಂದಿರುವ ಸೌದಿ ಅರೇಬಿಯಾದ ನಾಯಕತ್ವ ಧಾರ್ಮಿಕ ಬೂಟಾಟಿಕೆಯಲ್ಲಿ ತೊಡಗಿದೆ ಮತ್ತು ಭ್ರಷ್ಟ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದೆ ಎಂದು ಹೌತಿ ನಾಯಕರು ಹಾಗೂ ಬೆಂಬಲಿಗರು ಆರೋಪಿಸಿದ್ದಾರೆ.
'ಎಪ್ಸ್ಟೀನ್ ಗೆ ಕಾಬಾದ ಹೊದಿಕೆಯನ್ನು ನೀಡಿದವರೇ ಮಕ್ಕಾವನ್ನು ಗುರಿಯಾಗಿಸಿಕೊಂಡವರು' ಎಂದು ಹೌತಿ ಅಧ್ಯಕ್ಷ ಮಹ್ದಿ ಅಲ್-ಮಶಾತ್ ಹೇಳಿರುವುದಾಗಿ ಗುಂಪಿನ ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಕಳೆದ ತಿಂಗಳು ಮಕ್ಕಾದಲ್ಲಿ ಹೌತಿಗಳು ಡ್ರೋನ್ ಹಾರಿಸಿದ್ದಾರೆ ಎಂದು ಸೌದಿ ಅರೇಬಿಯಾ ಆರೋಪಿಸಿತ್ತು. ಮುಸ್ಲಿಮರನ್ನು ಕೆರಳಿಸುವ ಉದ್ದೇಶದ 'ಅವಮಾನಕರ' ಕೃತ್ಯ ಇದು ಎಂದು ಸೌದಿ ಅಧಿಕಾರಿಗಳು ಹೇಳಿದ್ದರು. ಹೌತಿಗಳು ಆರೋಪವನ್ನು ನಿರಾಕರಿಸಿದ್ದು, ಎಪ್ಸ್ಟೀನ್ ಗೆ ಸಂಬಂಧಿಸಿದ ವರದಿಗಳನ್ನು ಮುಂದಿಟ್ಟುಕೊಂಡು ಸೌದಿ ಅರೇಬಿಯ ವಿರುದ್ಧವೇ ಧಾರ್ಮಿಕ ದ್ರೋಹದ ಆರೋಪ ಹೊರಿಸಲು ಪ್ರಯತ್ನಿಸಿದ್ದಾರೆ. ಈ ಬೆಳವಣಿಗೆಯ ಬಳಿಕ ಪ್ರಚಾರ ಅಭಿಯಾನ ಮತ್ತಷ್ಟು ತೀವ್ರಗೊಂಡಿದೆ.
ವಿಡಿಯೊ, ಹಾಡು, ಭಾಷಣಗಳ ಮೂಲಕ ಪ್ರಚಾರ
ಹೌತಿಗಳ ಈ ಅಭಿಯಾನ ವಿಡಿಯೊಗಳು, ಹಾಡುಗಳು, ಭಾಷಣಗಳು, ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳ ಮೂಲಕ ಹರಡುತ್ತಿದೆ. ಬೆಂಬಲಿಗರು ಹಾಗೂ ಪ್ರಭಾವಿಗಳ ಜಾಲ ಸಂದೇಶಗಳನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತಿದೆ. ಯೆಮನ್ ನ ಬಹುಭಾಗವನ್ನು ನಿಯಂತ್ರಿಸುತ್ತಿರುವ ಹೌತಿಗಳು ಟಿವಿ, ವೆಬ್‌ಸೈಟ್‌ಗಳು, ರೇಡಿಯೊ, ಪತ್ರಿಕೆಗಳು ಮತ್ತು ಆನ್‌ಲೈನ್ ವೇದಿಕೆಗಳನ್ನು ಒಳಗೊಂಡ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ವಿಶ್ಲೇಷಕರ ಪ್ರಕಾರ, ಇರಾನ್ ನೊಂದಿಗೆ ನಿಕಟ ಸಂಬಂಧ ಹೊಂದಿರುವ ಗುಂಪುಗಳು ಎಪ್ಸ್ಟೀನ್ ನನ್ನು ಅಮೆರಿಕ ಮತ್ತು ಇಸ್ರೇಲ್ ನಲ್ಲಿನ ಭ್ರಷ್ಟಾಚಾರದ ಸಂಕೇತವಾಗಿ ಬಿಂಬಿಸಲು ಪ್ರಯತ್ನಿಸುತ್ತಿವೆ. ಇಂತಹ ನಿರೂಪಣೆಗಳನ್ನು ಯೆಹೂದ್ಯ ವಿರೋಧಿ ಪಿತೂರಿ ಸಿದ್ಧಾಂತಗಳನ್ನು ಹರಡಲು ಕೂಡ ಬಳಸಲಾಗಿದೆ.
ಹೌತಿ ನಾಯಕ ಅಬ್ದುಲ್-ಮಲಿಕ್ ಅಲ್-ಹೌತಿ ತಮ್ಮ ಭಾಷಣಗಳಲ್ಲಿ ಎಪ್ಸ್ಟೀನ್ ನನ್ನು ಹಲವು ಬಾರಿ ಉಲ್ಲೇಖಿಸಿದ್ದಾರೆ. ಫೆಬ್ರುವರಿಯಲ್ಲಿ ಮಾತನಾಡಿದ್ದ ಅವರು, ಎಪ್ಸ್ಟೀನ್ ಫೈಲ್ ಗಳು 'ಗಂಭೀರ ಗಮನವನ್ನು ಬಯಸುತ್ತವೆ' ಎಂದಿದ್ದರು. ನಾಯಕರು ಮತ್ತು ಗಣ್ಯರ ಮೇಲೆ ಪ್ರಭಾವ ಬೀರುವ ಜಾಲವೊಂದನ್ನು ಈ ದಾಖಲೆಗಳು ಬಹಿರಂಗಪಡಿಸಿವೆ ಎಂದು ಪ್ರತಿಪಾದಿಸಿದ್ದರು.
ಕ್ರೌನ್ ಪ್ರಿನ್ಸ್ ವಿರುದ್ಧವೂ ವಾಗ್ದಾಳಿ
ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಹೌತಿಗಳ ಪ್ರಚಾರದ ಕೇಂದ್ರಬಿಂದುವಾಗಿ ಸೌದಿ ಅರೇಬಿಯ ಮತ್ತು ಅದರ ಆಡಳಿತಗಾರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೊರಹೊಮ್ಮಿದ್ದಾರೆ.
ಅಮೆರಿಕದೊಂದಿಗಿನ ಸೌದಿ ಅರೇಬಿಯದ ಸಂಬಂಧ, ಹೌತಿಗಳ ವಿರುದ್ಧದ ಅದರ ನಿಲುವು ಮತ್ತು ಯೆಮನ್ ನಲ್ಲಿನ ಮಿಲಿಟರಿ ಹಸ್ತಕ್ಷೇಪವನ್ನು ಮುಂದಿಟ್ಟುಕೊಂಡು ಹೌತಿಗಳು ವಾಗ್ದಾಳಿ ನಡೆಸುತ್ತಿದ್ದಾರೆ.
ಯೆಮನ್ ನ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರವನ್ನು ಬೆಂಬಲಿಸುವ ಉದ್ದೇಶದಿಂದ ಸೌದಿ ಅರೇಬಿಯ 2015ರಿಂದ ಹೌತಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಈ ಸಂಘರ್ಷವು ವಿಶ್ವದ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಕ್ಕೆ ಕಾರಣವಾಗಲು ನೆರವಾಯಿತು.
ವಿದೇಶಗಳಲ್ಲಿ ಸೌದಿ ಅಧಿಕಾರಿಗಳು ಟೀಕೆಗೆ ಗುರಿಯಾಗುತ್ತಿರುವ ದೃಶ್ಯಗಳನ್ನೂ ಹೌತಿಗಳು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ನ್ಯೂಯಾರ್ಕ್ ನಲ್ಲಿ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರನ್ನು ಕಾರ್ಯಕರ್ತರೊಬ್ಬರು ಪ್ರಶ್ನಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಹೌತಿ ವಕ್ತಾರ ಅಮೀಲ್ ಹಯಾನ್ ಈ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. ಸೌದಿ ಅರೇಬಿಯಾದ ವಿರುದ್ಧದ ಅಂತರರಾಷ್ಟ್ರೀಯ ಟೀಕೆಗಳನ್ನು ಯೆಮನ್ ನಲ್ಲಿನ ಅದರ ಮಿಲಿಟರಿ ಕ್ರಮಗಳಿಗೆ ಲಿಂಕ್ ಮಾಡುವುದು ಈ ಪ್ರಚಾರದ ಉದ್ದೇಶವಾಗಿದೆ.



