ಬದಿಯಡ್ಕ: ಕುಂಟಿಕಾನ ಮಠದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನವರಾತ್ರಿ ಮಹಾಪರ್ವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ಭಕ್ತಿಭಾವದಿಂದ ಸಂಪನ್ನಗೊಂಡವು.
ಬೆಳಗ್ಗೆ ಶ್ರೀ ಗಣಪತಿ ಹವನ ನಡೆಯಿತು. ವೇದಮೂರ್ತಿ ನಡುಮನೆ ಕಿಳಿಂಗಾರು ಗೋಪಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಚಂಡಿಕಾ ಯಾಗ ಹಾಗೂ ರುದ್ರಾಭಿಷೇಕ ಸೇವೆಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಮಧ್ಯಾಹ್ನ ಶ್ರೀ ಶಂಕರನಾರಾಯಣ ದೇವರು ಹಾಗೂ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವರಿಗೆ ಮಹಾಪೂಜೆ ನಡೆಯಿತು. ಬಳಿಕ ನೆರೆದಿದ್ದ ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ಶ್ರೀ ರಾಮಕಥಾಮಂಜರಿ ಹಾಗೂ ಶ್ರೀ ಕೃಷ್ಣಕಥಾಮಂಜರಿ ಗ್ರಂಥಗಳ ವಿಶೇಷ ಪುಸ್ತಕ ಅಭಿಯಾನ ನಡೆಯಿತು. ನಂತರ ವೇದಮೂರ್ತಿ ಪಾಂಡೆಲು ಕಿಳಿಂಗಾರು ಕುಮಾರ ಭಟ್ ಅವರ ನೇತೃತ್ವದಲ್ಲಿ ದುರ್ಗಾಪೂಜೆ ನೆರವೇರಿತು.
ರಾತ್ರಿ ಪ್ರಸಾದ ಭೋಜನದ ಬಳಿಕ ಶ್ರೀಕೃಷ್ಣ ಭಟ್ ಉಂಡೆಮನೆ ಹಾಗೂ ತಂಡದವರಿಂದ ನಡೆದ ಅದ್ಧೂರಿ ಯಕ್ಷಗಾನ ಕಲಾಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.
ಕುಂಟಿಕಾನ ಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾದ ಈ ಧಾರ್ಮಿಕ ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

.jpg)
.jpg)
