HEALTH TIPS

ಯುರೋಪಿಯನ್ ಸಂಸತ್ತಿನ ಹೊರಗೆ ಟ್ರಂಪ್ ಬೆತ್ತಲೆ ಪ್ರತಿಮೆ ಅನಾವರಣ

 ಫ್ರಾನ್ಸ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಬೆತ್ತಲೆ ಪ್ರತಿಮೆಯನ್ನು ಸ್ಟ್ರಾಸ್‌ಬರ್ಗ್‌ನಲ್ಲಿರುವ ಯುರೋಪಿಯನ್‌ ಸಂಸತ್‌ ಕಟ್ಟಡದ ಬಳಿ ಅನಾವರಣಗೊಳಿಸಲಾಗಿದೆ. 


23 ಕ್ಯಾರೆಟ್‌ ಚಿನ್ನದ ಲೇಪನವಿರುವ 'ದಿ ಆರೆಂಜ್‌ ಪ್ಲೇಗ್‌' ಹೆಸರಿನ ಈ ಪ್ರತಿಮೆಯನ್ನು ಡೆನ್ಮಾರ್ಕ್‌ನ ಶಿಲ್ಪಿ ಜೆನ್ಸ್‌ ಗಾಲ್ಸ್‌ಚಿಯಟ್‌ ನಿರ್ಮಿಸಿದ್ದಾರೆ.

ಎಂಟು ಅಡಿ ಎತ್ತರದ ಈ ಪ್ರತಿಮೆಯಲ್ಲಿ ನಗ್ನವಾಗಿ ಟ್ರಂಪ್, ಒಂದು ಕೈಯಲ್ಲಿ ಗಾಲ್ಫ್‌ ಸ್ಟಿಕ್‌ ಮತ್ತು ಇನ್ನೊಂದು ಕೈಯಲ್ಲಿ ನ್ಯಾಯದ ತಕ್ಕಡಿ ಹಿಡಿದಿರುವಂತೆ ಹಾಗೂ ದಣಿದ, ಸೊರಗಿದ ದೇಹದ ವ್ಯಕ್ತಿಯೊಬ್ಬರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡಿರುವಂತೆ ಚಿತ್ರಿಸಲಾಗಿದೆ.

ಪ್ರತಿಮೆಯ ಕೆಳಗೆ 'ಅನ್ಯಾಯದ ರಾಜ' ಎಂದು ಬರೆಯಲಾಗಿದ್ದು, ಅದಕ್ಕೆ 'ನಾನು ಒಬ್ಬ ವ್ಯಕ್ತಿಯ ಹೆಗಲ ಮೇಲೆ ಕುಳಿತಿದ್ದೇನೆ. ಅವನು ನನ್ನ ಭಾರಕ್ಕೆ ಕುಸಿಯುತ್ತಿದ್ದಾನೆ. ಹೆಗಲಿನಿಂದ ಇಳಿಯುವುದೊಂದನ್ನು ಬಿಟ್ಟು, ಆತನಿಗೆ ನೆರವಾಗಲು ನಾನು ಏನನ್ನು ಬೇಕಾದರೂ ಮಾಡಬಲ್ಲೆ' ಎಂಬ ವಿವರ ನೀಡಲಾಗಿದೆ.

ಈ ಪ್ರತಿಮೆಯು ಅಮೆರಿಕದ ವಿದೇಶಾಂಗ ನೀತಿ ಹಾಗೂ ಹಸಿರು ನೀತಿಯ ಅಸ್ಥಿರ ನಿಲುವುಗಳ ವಿರುದ್ಧದ ವಿಡಂಬನಾತ್ಮಕ ಆಕ್ರೋಶ ಎಂದು ಗಾಲ್ಸ್‌ಚಿಯಟ್‌ ಹೇಳಿದ್ದಾರೆ. 'ನಿಯಮಾಧಾರಿತ ವಿಶ್ವ ವ್ಯವಸ್ಥೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವ ನಮ್ಮ ಸಾಮಾನ್ಯ ಪ್ರಯತ್ನಕ್ಕೆ ಟ್ರಂಪ್ ಅತಿದೊಡ್ಡ ಬೆದರಿಕೆಯಾಗಿ ಉಳಿದಿದ್ದಾರೆ' ಎಂದೂ ದೂರಿದ್ದಾರೆ.

'ನಾವೆಲ್ಲರೂ ಈ ವಿಚಾರಗಳನ್ನು ಗಮನಿಸಬೇಕು. ಇಂತಹ ವಿನಾಶಕಾರಿ ಪ್ರಭಾವದ ವಿರುದ್ಧ ಒಟ್ಟಾಗಿ ನಿಲ್ಲಬೇಕು' ಎಂದು ಕರೆ ನೀಡಿದ್ದಾರೆ. 

ಯುರೋಪಿಯನ್‌ ಸಂಸತ್ತಿನ ಡ್ಯಾನಿಷ್‌ ಸದಸ್ಯ ಪರ್‌ ಕ್ಲಾಸೆನ್‌ ಅವರು, 'ಯಾರಾದರೂ ಈ ಪ್ರತಿಮೆ ಪ್ರದರ್ಶನವನ್ನು ಸಹಿಸಿಕೊಳ್ಳಲಾಗದಷ್ಟು ಸೂಕ್ಷ್ಮ ಸ್ವಭಾವದವರಿಗೆ ಯುರೋಪಿಯನ್ ಸಂಸತ್ತಿನಲ್ಲಿ ಸ್ಥಳವಿಲ್ಲ' ಎಂದಿದ್ದಾರೆ.

ಈ ಪ್ರತಿಮೆಯನ್ನು ಗುರುವಾರದವರೆಗೆ (ಅಕ್ಟೋಬರ್‌ 8) ಸ್ಟ್ರಾಸ್‌ಬರ್ಗ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ನವೆಂಬರ್‌ನಲ್ಲಿ ಟರ್ಕಿಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ COP31 ವಾರ್ಷಿಕ ಹವಾಮಾನ ಶೃಂಗಸಭೆ ವೇಳೆಯೂ ಪ್ರದರ್ಶನಕ್ಕೆ ಇಡಲಾಗುತ್ತದೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ 3D ಮುದ್ರಿತ ಚಿಕ್ಕ ಪ್ರತಿಕೃತಿಗಳನ್ನು ಹಂಚಲಾಗುತ್ತದೆ ಎಂದು 'ಸಿಎನ್‌ಎನ್‌ ಡಾಟ್ ಕಾಂ' ವರದಿ ಮಾಡಿದೆ.

ಎಂಟು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಬುಧವಾರವಷ್ಟೇ ಹೇಳಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, 'ಬೇರೆ ಯಾರೂ ಮಾಡದ ಕೆಲಸ ಮಾಡಿದ್ದೇನೆ' ಎಂದು ಬೆನ್ನುತಟ್ಟಿಕೊಂಡಿದ್ದಾರೆ. ಆ ಮೂಲಕ, ಮತ್ತೊಮ್ಮೆ ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ. ಇಂತಹ ಸಂದರ್ಭದಲ್ಲೇ ಪ್ರತಿಮೆ ಅನಾವರಣಗೊಂಡಿದೆ.

'ಪಿಲ್ಲರ್‌ ಆಫ್‌ ಶೇಮ್‌' ರೂಪಿಸಿದ್ದ ಜೆನ್ಸ್‌
ತಮ್ಮ ಕೈಚಳಕದ ಮೂಲಕ ರಾಜಕೀಯ ವ್ಯವಸ್ಥೆಯ ಕುರಿತು ವಿಡಂಬನೆ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ ಶಿಲ್ಪಿ ಜೆನ್ಸ್‌ ಗಾಲ್ಸ್‌ಚಿಯಟ್‌.

ಈ ಹಿಂದೆ, 8 ಮೀಟರ್‌ ಉದ್ದದ 'ಪಿಲ್ಲರ್‌ ಆಫ್‌ ಶೇಮ್‌' ಪ್ರತಿಕೃತಿ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. 1989ರಲ್ಲಿ ಬೀಜಿಂಗ್‌ನ 'ತಿಯಾನನ್ಮೆನ್ ಸ್ಕ್ವೇರ್'ನಲ್ಲಿ ನಡೆದ ಹತ್ಯಾಕಾಂಡದ ವಿರುದ್ಧ ರೂಪಿಸಿದ ಈ ಪ್ರತಿಕೃತಿಯನ್ನು ಹಂಗೇರಿಯ ಬುಡಾಫೆಸ್ಟ್‌ನಲ್ಲಿರುವ ಫ್ರೀ ಹಾಂಗ್‌ ಕಾಂಗ್‌ ರಸ್ತೆಯಲ್ಲಿ ಅನಾವರಣಗೊಳಿಸಲಾಗಿದೆ.











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries