ಬದಿಯಡ್ಕ: ಬದುಕಿನ ಯಶಸ್ಸು ಕಠಿಣ ಪರಿಶ್ರಮದ ಫಲವಾಗಿರುತ್ತದೆ. ಫಲಾಪೇಕ್ಷೆ ರಹಿತ ಶ್ರಮಿಕ ಜೀವನ ಬದುಕನ್ನು ನವಿರಾಗಿಸುತ್ತದೆ ಎಂದು ಪೆರಿಯ ಕೇರಳ ಕೇಂದ್ರಯ ವಿ.ವಿ.ಯ ಪ್ರಾಧ್ಯಾಪಕ ರಾಜೇಂದ್ರ ಪಿಲಾಂಕಟ್ಟೆ ತಿಳಿಸಿದರು.
ಪೆರಡಾಲ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪ ಜಿಲ್ಲೆಯ ವಾರ್ಷಿಕ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಮಾತೃಭಾಷೆಯ ಮಹತ್ವ ಹಾಗೂ ಅಗತ್ಯವನ್ನು ಅನುಭವಗಳೊಂದಿಗೆ ಅವರು ಹಂಚಿಕೊಂಡಿದ್ದು ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿತ್ತು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವಂತೆ ಪ್ರೀತಿಪೂರ್ವಕ ಸ್ವಾಗತಿಸಿದರು.
ಶ್ರೀ ಹರ್ಷ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಅಶೋಕ ಎಂ, ನಿವೃತ್ತ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಮಹಾಲಿಂಗೇಶ್ವರ ರಾಜ್ ಡಿ, ಕೇಂದ್ರ ಸಮಿತಿ ಸದಸ್ಯ ಶರತ್ ಕುಮಾರ್ ಎಂ. ಮುಂತಾದವರು ಶುಭ ಹಾರೈಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ಪ್ರಾಸ್ತಾನಿಕವಾಗಿ ಮಾತನಾಡಿದರು. 2025 26ನೇ ಶೈಕ್ಷಣಿಕ ವರ್ಷದಲ್ಲಿ ಸಿಎಂ ಕಿಡ್ಸ್ ಸ್ಕಾಲರ್ಶಿಪ್ ಗೆ ಅರ್ಹರಾದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಕುಂಬಳೆ ಉಪ ಜಿಲ್ಲೆಗೆ ನೂತನವಾಗಿ ವಿದ್ಯಾಧಿಕಾರಿಗಳಾಗಿ ನೇಮಕಗೊಂಡ ಅಶೋಕ ಎಂ. ಹಾಗೂ ಬಿಪಿಒ ಆಗಿ ನೇಮಕಗೊಂಡ ಶ್ರೀಹರ್ಷ ಇವರನ್ನು ಶಾಲುಹೊದಿಸಿ ಫಲ ಪುಷ್ಪಗಳನ್ನು ನೀಡಿ ಅಭಿನಂದಿಸಲಾಯಿತು. ಸಂಘಟನೆ ಹಾದು ಬಂದ ದಾರಿಯನ್ನು ತಮ್ಮ ನೇರ ಅನುಭವದೊಂದಿಗೆ ಮಹಾಲಿಂಗೇಶ್ವರ ರಾಜ್ ಇವರು ಅಧ್ಯಾಪಕರಿಗಾಗಿ ತೆರೆದಿಟ್ಟರು. ಸಂಘಟನೆಯ ಮಹತ್ವವನ್ನು ಒತ್ತಿ ಹೇಳಿದ ಅವರು ಸಂಘಟನೆಗೆ ಶುಭ ಹಾರೈಸಿದರು. ದಸರಾ ನಾಡ ಹಬ್ಬದ ಪ್ರಯುಕ್ತ ಅಧ್ಯಾಪಕರಿಗಾಗಿ ನಡೆಸಿದ ನಾಡಗೀತೆ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಜ್ಯೋತ್ಸ್ನಾ ಕಡಂದೇಲು ಪ್ರಾರ್ಥಿಸಿದರು. ಶಾಮಲಾ ಮವ್ವಾರು ವಂದಿಸಿದರು.ಕಾರ್ಯಕ್ರಮವನ್ನು ರಾಜು ಕ್ರಾಸ್ತ ನಿರೂಪಿಸಿದರು.
ಬಳಿಕ ನಡೆದ ಪ್ರತಿನಿಧಿ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ಅಧ್ಯಕ್ಷ ಶ್ರೀಹರ್ಷ ಎಂ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಸೌಮ್ಯಕುಮಾರಿ ಮರು ಆಯ್ಕೆಯಾದರು. ಶೈಲಜಾ ಕೋಶಾಧಿಕಾರಿಯಾಗಿ ಆಯ್ಕೆಗೊಂಡರು. ದಸರಾ ನಾಡ ಹಬ್ಬದ ಪ್ರಯುಕ್ತ ಅಧ್ಯಾಪಕರಿಗಾಗಿ ನಡೆಸಿದ ಸಮೂಹ ನಾಡಗೀತೆ ಗಾಯನ ಸ್ಪರ್ಧೆಯು ಸಮ್ಮೇಳನಕ್ಕೆ ಮತ್ತಷ್ಟು ಮೆರುಗನ್ನು ನೀಡಿತು. ಶಿಕ್ಷಕ ಶಿಕ್ಷಕಿಯರು ಉತ್ಸಾಹದಿಂದ ಪಾಲ್ಗೊಂಡರು.

.jpg)
.jpg)
