ಕಾಸರಗೋಡು: ಹೈನುಗಾರಿಕೆಯನ್ನು ವೈಜ್ಞಾನಿಕ ಹಾಗೂ ಆಧುನಿಕ ವಿಧಾನಗಳ ಮೂಲಕ ಹೆಚ್ಚು ಲಾಭದಾಯಕವಾಗಿಸುವ ಉದ್ದೇಶದಿಂದ ಪರಪ್ಪ ಬ್ಲಾಕ್ ಪಂಚಾಯತ್ ಜಾರಿಗೊಳಿಸಿರುವ ಸಮಗ್ರ ‘ಪಾಲಾಜಿ’ ಯೋಜನೆ ಹೈನುಗಾರಿಕೆಗೆ ಹೊಸ ದಾರಿ ತೆರೆದಿದೆ.
ಜಾನುವಾರುಗಳ ಆರೋಗ್ಯ ಸಂರಕ್ಷಣೆ, ಹಾಲಿನ ಉತ್ಪಾದನೆ ಹೆಚ್ಚಳ, ವೈಜ್ಞಾನಿಕ ಸಂತಾನೋತ್ಪತ್ತಿ, ಖನಿಜಾಂಶಗಳ ಪೂರೈಕೆ ಹಾಗೂ ಮೇವು ಕೃಷಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.
ಒಂದು ವರ್ಷದ ಅವಧಿಯಲ್ಲಿ ಅನುಷ್ಠಾನಗೊಳ್ಳುವ ಈ ಯೋಜನೆಯ ಮೂಲಕ ಹೈನುಗಾರರ ಆದಾಯ ಹೆಚ್ಚಿಸುವುದರ ಜೊತೆಗೆ ಜಾನುವಾರುಗಳ ಆರೋಗ್ಯವನ್ನು ಸುಧಾರಿಸುವ ಗುರಿ ಹೊಂದಲಾಗಿದೆ.
ಲಿಂಗನಿರ್ಧರಿತ ಕೃತಕ ಗರ್ಭಧಾರಣೆಗೆ ಆದ್ಯತೆ
ಯೋಜನೆಯ ಪ್ರಮುಖ ವಿಶೇಷತೆಯೆಂದರೆ ಹೆಣ್ಣು ಕರುಗಳ ಜನನದ ಸಾಧ್ಯತೆಯನ್ನು ಹೆಚ್ಚಿಸುವ ಲಿಂಗನಿರ್ಧರಿತ ವೀರ್ಯಾಣುಗಳ (ಸೆಕ್ಸ್ ಸೋರ್ಟೆಡ್ ಸಿಮೆನ್) ಬಳಕೆ. ಕೇರಳ ಲೈವ್‌ಸ್ಟಾಕ್ ಡೆವಲಪ್‌ಮೆಂಟ್ ಬೋರ್ಡ್‌ನ ಸಹಕಾರದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ವೀರ್ಯಾಣು ಖರೀದಿಯ ವೆಚ್ಚವನ್ನು ಬ್ಲಾಕ್ ಪಂಚಾಯತ್ ಭರಿಸುತ್ತಿದೆ. ಇದರಿಂದ ಹೈನುಗಾರರು ಹೆಚ್ಚುವರಿ ಆರ್ಥಿಕ ಹೊರೆ ಇಲ್ಲದೆ ಆಧುನಿಕ ಕೃತಕ ಗರ್ಭಧಾರಣಾ ತಂತ್ರಜ್ಞಾನದ ಪ್ರಯೋಜನ ಪಡೆಯಬಹುದು.
ಯೋಜನೆಯಡಿ ಈವರೆಗೆ 25 ಹೆಣ್ಣು ಕರುಗಳು ಜನಿಸಿವೆ. ಬ್ಲಾಕ್ ವ್ಯಾಪ್ತಿಯ ಏಳು ಪಂಚಾಯತ್‌ಗಳ ಏಳು ಪಶುವೈದ್ಯಕೀಯ ಚಿಕಿತ್ಸಾಲಯಗಳು ಹಾಗೂ ಸುಮಾರು 30 ಪಶುವೈದ್ಯಕೀಯ ಉಪಕೇಂದ್ರಗಳ ಮೂಲಕ ರೈತರಿಗೆ ಸೇವೆ ಒದಗಿಸಲಾಗುತ್ತಿದೆ.
ರೋಗ ತಡೆಗೆ ವೈಜ್ಞಾನಿಕ ಪರೀಕ್ಷೆ
ರೋಗಲಕ್ಷಣಗಳು ಕಾಣಿಸಿಕೊಂಡ ಬಳಿಕ ಚಿಕಿತ್ಸೆ ನೀಡುವ ಬದಲು, ರೋಗದ ಸಾಧ್ಯತೆಗಳನ್ನು ಮೊದಲೇ ಪತ್ತೆಹಚ್ಚಿ ತಡೆಗಟ್ಟುವ ಕ್ರಮಗಳಿಗೆ ‘ಪಾಲാഴಿ’ ಯೋಜನೆ ಒತ್ತು ನೀಡಿದೆ. ಇದರ ಭಾಗವಾಗಿ ಜಾನುವಾರುಗಳ ರಕ್ತ ಹಾಗೂ ಸಗಣಿ ಮಾದರಿಗಳನ್ನು ಪರೀಕ್ಷಿಸಿ ಪೌಷ್ಟಿಕಾಂಶಗಳ ಕೊರತೆ ಮತ್ತು ಜಂತುಹುಳುಗಳ ಇರುವಿಕೆಯನ್ನು ಪರಿಶೀಲಿಸಲಾಗಿದೆ.
ಪರೀಕ್ಷೆಯಲ್ಲಿ ಹಸುಗಳಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್‌ನಂತಹ ಖನಿಜಾಂಶಗಳ ಕೊರತೆ ಹಾಗೂ ಸತುವಿನ ಹೆಚ್ಚಿನ ಪ್ರಮಾಣ ಪತ್ತೆಯಾಗಿದೆ. ಹೆರಿಗೆಯ ಬಳಿಕ ಹಸುಗಳು ನಿತ್ರಾಣಗೊಂಡು ಕುಸಿದು ಬೀಳಲು ಕ್ಯಾಲ್ಸಿಯಂ ಕೊರತೆಯೂ ಕಾರಣವಾಗಿರಬಹುದು ಎಂಬ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಣ್ಣುತ್ತಿ ಪಶುವೈದ್ಯಕೀಯ ಕಾಲೇಜಿನ ಸಹಕಾರದೊಂದಿಗೆ ಪರಪ್ಪ ಬ್ಲಾಕ್‌ನ ಮಣ್ಣು ಮತ್ತು ಜಾನುವಾರುಗಳ ವೈಶಿಷ್ಟ್ಯಗಳನ್ನು ಪರಿಗಣಿಸಿ ವಿಶೇಷ ಖನಿಜಾಂಶ ಮಿಶ್ರಣವನ್ನೂ ಅಭಿವೃದ್ಧಿಪಡಿಸಲಾಗಿದೆ. ಈಸ್ಟ್ ಎಳೇರಿ, ವೆಸ್ಟ್ ಎಳೇರಿ ಹಾಗೂ ಬಳ್ಳಾಲ್ ಪಂಚಾಯತ್‌ಗಳ ಹಸುಗಳಿಗೆ ತಲಾ ಐದು ಕಿಲೋಗ್ರಾಂ ಮಿಶ್ರಣ ವಿತರಿಸಲಾಗಿದೆ. ಸಗಣಿ ಪರೀಕ್ಷೆಯ ಮೂಲಕ ಹಾಲಿನ ಉತ್ಪಾದನೆಗೆ ಅಡ್ಡಿಯಾಗುವ ಜಂತುಹುಳುಗಳ ಇರುವಿಕೆಯನ್ನು ಪತ್ತೆಹಚ್ಚಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
23 ಲಕ್ಷ ರೂ. ವೆಚ್ಚದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನರ್
ಜಾನುವಾರುಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆಧುನಿಕ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಕೃತಕ ಗರ್ಭಧಾರಣೆಯ 30 ದಿನಗಳೊಳಗೆ ಗರ್ಭಧಾರಣೆಯನ್ನು ದೃಢಪಡಿಸಲು ಹಾಗೂ ಗರ್ಭದಲ್ಲಿರುವ ಕರುವಿನ ಲಿಂಗವನ್ನು ಗುರುತಿಸಲು 23 ಲಕ್ಷ ರೂ. ವೆಚ್ಚದಲ್ಲಿ ಪೋರ್ಟಬಲ್ ಅಲ್ಟ್ರಾಸೌಂಡ್ ಸ್ಕ್ಯಾನರ್ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಡಿಸೆಂಬರ್‌ನಲ್ಲಿ ನಡೆಯಲಿರುವ ಕಾಲುಬಾಯಿ ರೋಗ ನಿರೋಧಕ ಲಸಿಕಾ ಅಭಿಯಾನದಲ್ಲಿ ಔಷಧಗಳ ಗುಣಮಟ್ಟ ಕಾಪಾಡಲು ಅಗತ್ಯವಾದ ಕೂಲರ್ ಬ್ಯಾಗ್‌ಗಳನ್ನು ಸಿದ್ಧಪಡಿಸುವ ಯೋಜನೆಯೂ ಇದೆ.
ಮೇವು ಉತ್ಪಾದನೆಗೆ ವಿಶೇಷ ಯೋಜನೆ
ಜಾನುವಾರುಗಳಿಗೆ ಅಗತ್ಯವಾದ ಮೇವು ಲಭ್ಯವಾಗುವಂತೆ ಮಾಡಲು ರೈತರ ಮನೆ ಆವರಣಗಳಲ್ಲಿ ಮೇವು ಬೆಳೆಸುವ ಮೈಕ್ರೋ ಲೆವೆಲ್ ಫೋಡರ್ ಪ್ಲಾನ್ ಹಾಗೂ ಹೈನುಗಾರರ ಸಹಕಾರ ಸಂಘಗಳ ಮೂಲಕ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವ ಮ್ಯಾಕ್ರೋ ಲೆವೆಲ್ ಫೋಡರ್ ಪ್ಲಾನ್ ರೂಪಿಸಲಾಗಿದೆ.
ಹಸಿರು ಮೇವಿನ ಲಭ್ಯತೆ ಹೆಚ್ಚಿಸುವುದರಿಂದ ಪಶು ಆಹಾರದ ವೆಚ್ಚ ಕಡಿಮೆ ಮಾಡಲು, ಜಾನುವಾರುಗಳ ಆರೋಗ್ಯ ಸುಧಾರಿಸಲು ಮತ್ತು ಹಾಲಿನ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗಲಿದೆ.
ಹೈನುಗಾರರ ಆದಾಯ ಹೆಚ್ಚಿಸುವ ಗುರಿ
ವೈಜ್ಞಾನಿಕ ಜಾನುವಾರು ನಿರ್ವಹಣೆ, ಸುಧಾರಿತ ಸಂತಾನೋತ್ಪತ್ತಿ ವಿಧಾನಗಳು, ರೋಗ ತಡೆ ಹಾಗೂ ಮೇವು ಅಭಿವೃದ್ಧಿಯ ಮೂಲಕ ಹೈನುಗಾರಿಕೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಲಾಭದಾಯಕವಾಗಿಸಲು ‘ಪಾಲಾಜಿ’ ಯೋಜನೆ ನೆರವಾಗಲಿದೆ ಎಂದು ಯೋಜನಾ ಅನುಷ್ಠಾನಾಧಿಕಾರಿ ಹಾಗೂ ಕೊನ್ನಕ್ಕಾಡ್ ಪಶುವೈದ್ಯಕೀಯ ಆಸ್ಪತ್ರೆಯ ಪ್ರಭಾರ ಹಿರಿಯ ಪಶುವೈದ್ಯೆ ಡಾ. ಎಲ್. ವಿಶ್ವಲಕ್ಷ್ಮಿ ತಿಳಿಸಿದ್ದಾರೆ.
ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಯನ್ನು ಸುಧಾರಿಸುವುದರ ಜೊತೆಗೆ ಹೈನುಗಾರರ ಉತ್ಪಾದಕತೆ ಹಾಗೂ ಆದಾಯ ಹೆಚ್ಚಿಸುವುದೂ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.



