ಕೊಚ್ಚಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಿವಾದಾತ್ಮಕ ಎಕ್ಸ್ ಪೋಸ್ಟ್ ಪ್ರಕಟಿಸಿದ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ವಕೀಲರೊಬ್ಬರು ಅಟಾರ್ನಿ ಜನರಲ್‌ಗೆ ಪತ್ರ ಬರೆದಿದ್ದಾರೆ.
ವಕೀಲೆ ಸವಿತಾ ಸಿಂಗ್ ಅವರು ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಿ ಅಟಾರ್ನಿ ಜನರಲ್‌ಗೆ ಮನವಿ ಸಲ್ಲಿಸಿದ್ದಾರೆ. ವಿವಾದಾತ್ಮಕ ಎಕ್ಸ್ ಪೋಸ್ಟ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಕೆಪಿಸಿಸಿಗೆ ನೋಟಿಸ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ವಕೀಲೆ ಈ ಕ್ರಮ ಕೈಗೊಂಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ನತ್ತ ನಡೆಸಿದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೇರಳ ಘಟಕದ ಅಧಿಕೃತ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟವಾಗಿತ್ತು.
ಕಾನೂನು ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿತ್ತು.
‘ಸೂರ್ಯಕಾಂತ್ ರಾಜೀನಾಮೆ ನೀಡಿ, ಬದಲಿಗೆ ಬೇರೊಬ್ಬರನ್ನು ನಾವು ಹುಡುಕುತ್ತೇವೆ’ ಎಂಬರ್ಥದ ಹೇಳಿಕೆಯೂ ಪೋಸ್ಟ್‌ನಲ್ಲಿತ್ತು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ನ ಕೇರಳ ಘಟಕವು ಪೋಸ್ಟ್ ಅನ್ನು ತಕ್ಷಣವೇ ಅಳಿಸಿತ್ತು.



