ಕೊಚ್ಚಿ: ಎರ್ನಾಕುಳಂನ ಕಡುವಂಭಾಗಂ ಪ್ರದೇಶದಲ್ಲಿರುವ ಯಹೂದಿ ಪ್ರಾರ್ಥನಾ ಮಂದಿರದ ಮುಂದೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಉಗ್ರ ಸಂಪರ್ಕವಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ.
ಪ್ರಕರಣದಲ್ಲಿ ಬಂಧಿತನಾಗಿರುವ ಪುತ್ತನ್ಕುರಿಶ್ ನಿವಾಸಿ ಎಬಿನ್ ಪಾಲ್ನ ಮೊಬೈಲ್ ಫೋನ್ನಲ್ಲಿ ಅನುಮಾನಾಸ್ಪದ ಚಾಟ್ಗಳು ಪತ್ತೆಯಾಗಿವೆ. ಬೆಂಕಿ ಹಚ್ಚುವ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಕೆಲವರಿಗೆ ಕಳುಹಿಸಿರುವುದೂ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಈ ಹಿಂದೆ ಮೂವಾಟ್ಟುಪುಳದ ಉಪಯೋಗಿಸಿದ ಕಾರುಗಳ ಮಾರಾಟ ಮಳಿಗೆಯೊಂದಕ್ಕೂ ಆತ ಬೆಂಕಿ ಹಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗುಪ್ತಚರ ದಳ (ಐಬಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹಾಗೂ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.
ಆರೋಪಿಯ ಮನೆಯ ಪರಿಶೀಲನೆ ವೇಳೆ ಮಾದಕ ವಸ್ತುಗಳನ್ನೂ ಪತ್ತೆಹಚ್ಚಲಾಗಿದೆ. ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ನಡೆಯುತ್ತಿದ್ದು, ಆರೋಪಿಯ ಮಾನಸಿಕ ಸ್ಥಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಉಗ್ರ ಸಂಪರ್ಕದ ಕುರಿತು ತನಿಖಾ ಸಂಸ್ಥೆಗಳಿಂದ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.



