ಸುಲ್ತಾನ್‌ಪುರ (ಉತ್ತರ ಪ್ರದೇಶ): ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ನಡುವೆ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಸಣ್ಣ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾನನಷ್ಟ ಮೊಕದ್ದಮೆಯೊಂದರ ವಿಚಾರಣೆಗೆ ಸೋಮವಾರ ಸುಲ್ತಾನ್‌ಪುರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ರಾಹುಲ್ ಗಾಂಧಿ ಸುರಕ್ಷಿತವಾಗಿದ್ದಾರೆ. ಘಟನೆ ಗಂಭೀರ ಸ್ವರೂಪದ್ದಲ್ಲ. ದೊಡ್ಡ ಗಾಯಗಳಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 10.15ರ ವೇಳೆಗೆ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ಮುಂಭಾಗದಲ್ಲಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸೇರಿದ ಖಾಸಗಿ ವಾಹನವೊಂದು ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಹಿಂದಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಘಟನೆಯ ಬಳಿಕ ಬೆಂಗಾವಲು ಪಡೆ ಸುಲ್ತಾನ್‌ಪುರದತ್ತ ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ಅವರು ಹೇಳಿದ್ದಾರೆ.
ಭದ್ರತೆಗಾಗಿ ಬೆಂಗಾವಲು ಪಡೆಯೊಂದಿಗೆ ಪೊಲೀಸ್ ಸಿಬ್ಬಂದಿಯೂ ಇದ್ದರು. ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ಬೆಳಿಗ್ಗೆ 11.15ರ ಸುಮಾರಿಗೆ ಬೆಂಗಾವಲು ಪಡೆ ಸುಲ್ತಾನ್‌ಪುರ ನ್ಯಾಯಾಲಯವನ್ನು ತಲುಪುವ ನಿರೀಕ್ಷೆಯಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದು.



