ಪಣಜಿ: 'ಎಸ್‌ಐಆರ್ ಕರಡು ಪಟ್ಟಿಯಲ್ಲಿ ಹೆಸರು ಇಲ್ಲ ಎಂದಾಕ್ಷಣ, ಮತದಾರರ ಹೆಸರನ್ನು ಅಳಿಸಲಾಗಿದೆ ಎಂದರ್ಥವಲ್ಲ' ಎಂದು ಚುನಾವಣಾ ಆಯೋಗವು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಗೋವಾದ ಸೇಂಟ್ ಕ್ರೂಸ್ ವಿಧಾನಸಭಾ ಕ್ಷೇತ್ರದ ನಿವಾಸಿ ಪರೇಶ್ ಸಾಲ್ಗೋಂಕರ್ ಕುಟುಂಬದ 6 ಸದಸ್ಯರ ಹೆಸರು ಕರಡು ಪಟ್ಟಿಯಲ್ಲಿ ಇರಲಿಲ್ಲ.
ಈ ಬಗ್ಗೆ ಪರೇಶ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ವಾಲ್ಮೀಕಿ ಮೆನೇಜ್ ಮತ್ತು ಅಮಿತ್ ಜಾಮ್‌ಸಾಂದೇಕರ್ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತು.
ಎಸ್‌ಐಆರ್, ಆಯೋಗವು ಪ್ರತಿ ಬಾರಿ ನಡೆಸುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಲ್ಲ. ಎಸ್‌ಐಆರ್, ಪಟ್ಟಿಯನ್ನು ಸಿದ್ಧಪಡಿಸುವ ಹೊಸ ಆರಂಭದಂತೆ. 2002ರ ವೇಳೆ ಅರ್ಜಿದಾರರು ವಾಸವಿದ್ದ ಸ್ಥಳದಲ್ಲಿ ಪ್ರಸ್ತುತ ಕಳೆದ 8-10 ವರ್ಷಗಳಿಂದ ವಾಸವಿಲ್ಲ. ಜೊತೆಗೆ, ಅವರು ವಿಳಾಸ ಬದಲಾವಣೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ' ಎಂದು ಆಯೋಗದ ಪರ ವಕೀಲ ಕುಂಭಕೋಣಿ ವಾದಿಸಿದರು.



