ನವದೆಹಲಿ: ವ್ಯಕ್ತಿಯೊಬ್ಬರ ಕಿವಿಯನ್ನು ಕಚ್ಚಿ ಕತ್ತರಿಸಿದ ಆರೋಪ ಎದುರಿಸುತ್ತಿರುವ ರಾಜೀವ್ ರಂಜನ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 'ಆತನ ಕಿವಿಯನ್ನೇ ಕಚ್ಚಿ ತೆಗೆದಿದ್ದೀರಿ; ಅದನ್ನು ಮರಳಿ ತರುವುದು ಹೇಗೆ?' ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಬುಧವಾರ ಪ್ರಶ್ನಿಸಿತು.
ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ಜಾರ್ಖಂಡ್ ಹೈಕೋರ್ಟ್ ನ ಫೆಬ್ರುವರಿ 2026ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.
ನೆರೆಹೊರೆಯವರ ನಡುವೆ ದೀರ್ಘಕಾಲದಿಂದ ವಿವಾದವಿದ್ದು, ಒಂದು ರಾತ್ರಿ ಅದು ಹಿಂಸಾತ್ಮಕ ಘರ್ಷಣೆಗೆ ತಿರುಗಿತ್ತು ಎಂದು ಆರೋಪಿಯ ಪರ ವಕೀಲರು ವಾದಿಸಿದರು. ಘಟನೆಯ ಸಂಬಂಧ ಎರಡೂ ಕಡೆಯವರು ಪ್ರತ್ಯೇಕ ಎಫ್‌ಐಆರ್ ಗಳನ್ನು ದಾಖಲಿಸಿದ್ದರು. ಜನ್ಮಾಷ್ಟಮಿಯ ಸಂಭ್ರಮಾಚರಣೆ ನಡೆಯುತ್ತಿದ್ದ ರಾತ್ರಿ ಈ ಘಟನೆ ಸಂಭವಿಸಿತ್ತು ಎಂದು ಅವರು ತಿಳಿಸಿದರು.
'ಮೊದಲು ನೀವು ಬಂದೂಕು ಹೊರತೆಗೆದಿದ್ದೀರಿ. ಬಳಿಕ ಆತನ ಕಿವಿಯನ್ನು ಹಿಡಿದು ಕಚ್ಚಿ ತೆಗೆದಿದ್ದೀರಿ. ಆದರೂ ನಿಮಗೆ ನಿರೀಕ್ಷಣಾ ಜಾಮೀನು ಬೇಕೇ?' ಎಂದು ನ್ಯಾಯಾಲಯ ಪ್ರಶ್ನಿಸಿತು.
ಬಂದೂಕು ಹೊರತೆಗೆದ ಆರೋಪ ಸುಳ್ಳು ಎಂದು ವಕೀಲರು ಪ್ರತಿಪಾದಿಸಿದಾಗ, 'ಬಂದೂಕಿನ ವಿಚಾರವನ್ನು ಬದಿಗಿಡೋಣ. ಕಿವಿಯ ವಿಷಯವೇನು? ಆತನ ಕಿವಿಯನ್ನು ಮರಳಿ ತರುವುದು ಹೇಗೆ?' ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
►'ನನ್ನ ಕಕ್ಷಿದಾರರ ಮೇಲೂ ಹಲ್ಲೆ ನಡೆದಿದೆ'
ಘರ್ಷಣೆಯಲ್ಲಿ ತಮ್ಮ ಕಕ್ಷಿದಾರರ ಮೇಲೂ ಹಲ್ಲೆ ನಡೆದಿದೆ ಎಂದು ಆರೋಪಿಯ ಪರ ವಕೀಲರು ವಾದಿಸಿದರು. ಅವರನ್ನು ನೆಲಕ್ಕೆ ಒತ್ತಿ ಹಿಡಿದು, ಕೈಕಾಲುಗಳನ್ನು ಹಿಡಿದಿಟ್ಟುಕೊಂಡು ಎದೆಯ ಭಾಗದಲ್ಲಿ ಗಾಯಗೊಳಿಸಲಾಗಿದೆ ಎಂದು ಹೇಳಿದರು. ತಮ್ಮ ಕಕ್ಷಿದಾರರೇ ಸಂತ್ರಸ್ತರು ಎಂದೂ ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, 'ಅಲ್ಲಿ ಜಗಳ ನಡೆದಿತ್ತು ಎಂದು ನೀವು ಹೇಳುತ್ತಿದ್ದೀರಾ?' ಎಂದು ಪ್ರಶ್ನಿಸಿತು. 'ಹೌದು, ಜಗಳ ನಡೆದಿತ್ತು. ನನ್ನ ಕಕ್ಷಿದಾರರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ' ಎಂದು ವಕೀಲರು ಉತ್ತರಿಸಿದರು. ಆದರೆ, ಈ ವಾದಗಳಿಂದ ತೃಪ್ತಿಗೊಳ್ಳದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
►ತಲೆ, ಮುಖದ ಮೇಲೆ ಗಂಭೀರ ಗಾಯಗಳು
ರಾಂಚಿಯ ಅರ್ಗೋರಾ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ರಾಜೀವ್ ರಂಜನ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ ಗಳ ಅಡಿಯಲ್ಲಿ, ವಿಶೇಷವಾಗಿ ಅಪಾಯಕಾರಿ ಆಯುಧಗಳು ಅಥವಾ ಉಪಕರಣಗಳನ್ನು ಬಳಸಿ ಗಾಯ ಅಥವಾ ತೀವ್ರ ಸ್ವರೂಪದ ಗಾಯ ಉಂಟುಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್ 118ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
ನಿರೀಕ್ಷಣಾ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಜಾರ್ಖಂಡ್ ಹೈಕೋರ್ಟ್, ಪೊಲೀಸ್ ವರದಿಯ ಪ್ರಕಾರ ಸಂತ್ರಸ್ತನ ತಲೆ ಮತ್ತು ಮುಖದ ಮೇಲೆ ಹಲವು ಗಂಭೀರ ಕತ್ತರಿಸಿದ ಗಾಯಗಳಿದ್ದವು ಎಂದು ಉಲ್ಲೇಖಿಸಿತ್ತು.



