ನವದೆಹಲಿ: ಭಾರತದಲ್ಲಿ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸುವ ಕುರಿತು ವಿವಾದ ತೀವ್ರಗೊಂಡಿರುವ ನಡುವೆಯೇ, ಈ ಸೇವೆಯ ಭದ್ರತಾ ಪರಿಣಾಮಗಳು ಹಾಗೂ ನಿಯಂತ್ರಕ ವ್ಯವಸ್ಥೆಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಲು ಸಂಸದೀಯ ಸ್ಥಾಯಿ ಸಮಿತಿ ಮುಂದಾಗಿದೆ.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಮುಂಬರುವ ಸಭೆಯಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಿತಿಯ ಸಭೆಯ ಬಳಿಕ PTI ಜೊತೆ ಮಾತನಾಡಿದ ಅವರು, 'ಮುಂಬರುವ ದಿನಗಳಲ್ಲಿ ನಡೆಯಲಿರುವ ನಮ್ಮ ಸಭೆಯಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳ ಕುರಿತು ಚರ್ಚಿಸುತ್ತೇವೆ' ಎಂದರು.
ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಅನುಮೋದನೆ ದೊರೆಯುವ ಮುನ್ನವೇ, ಅದರ ಮಾತೃಸಂಸ್ಥೆ ಸ್ಪೇಸ್ ಎಕ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಹಾಗೂ ಭಾರತದ ರಾಜಕೀಯ ಮತ್ತು ಉದ್ಯಮ ವಲಯದ ಪ್ರಮುಖರ ನಡುವೆ ವಾಗ್ವಾದ ನಡೆಯುತ್ತಿದೆ. ಪ್ರಬಲ ವ್ಯಾಪಾರಿ ಹಿತಾಸಕ್ತಿಗಳು ಸ್ಟಾರ್ ಲಿಂಕ್ ಸೇವೆಯ ಪ್ರವೇಶಕ್ಕೆ ಅಡ್ಡಿಯಾಗುತ್ತಿವೆ ಎಂಬುದು ಮಸ್ಕ್ ಅವರು ಆರೋಪಿಸಿದ್ದರು.
ಕಳೆದ ವಾರ X ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಗಳನ್ನು ಪ್ರಕಟಿಸಿದ್ದ ಮಸ್ಕ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರನ್ನು ಕುರಿತು ವ್ಯಂಗ್ಯವಾಡಿದ್ದರು. ಕೆಲವು ಉದ್ಯಮ ಸಮೂಹಗಳು ಭಾರತೀಯ ಗ್ರಾಹಕರ ಮೇಲೆ ಏಕಸ್ವಾಮ್ಯದ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ ಎಂದೂ ಆರೋಪಿಸಿದ್ದರು.
ಆದರೆ, ಸಂವಹನ ಸಚಿವಾಲಯವು ಈ ಆರೋಪಗಳನ್ನು ತಳ್ಳಿಹಾಕಿದೆ. ಭಾರತದ ನಿಯಂತ್ರಕ ವ್ಯವಸ್ಥೆ ಅನ್ಯಾಯಯುತವಾಗಿದೆ ಅಥವಾ ತಾರತಮ್ಯದಿಂದ ಕೂಡಿದೆ ಎಂಬ ಆರೋಪಗಳು ಆಧಾರರಹಿತ ಎಂದು ಹೇಳಿದೆ. ವಾಣಿಜ್ಯ ಸೇವೆ ಆರಂಭಿಸುವ ಮೊದಲು ಉಪಗ್ರಹ ನಿರ್ವಾಹಕರು ಭದ್ರತಾ ಷರತ್ತುಗಳು ಮತ್ತು ಸ್ಪೆಕ್ಟ್ರಮ್ ಹಂಚಿಕೆ ನಿಯಮಗಳು ಸೇರಿದಂತೆ ಎಲ್ಲ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಸರಕಾರ ಸ್ಪಷ್ಟಪಡಿಸಿದೆ.
►'ಭದ್ರತಾ ನೀತಿಯಲ್ಲಿ ರಾಜಿ ಇಲ್ಲ'
ಸ್ಟಾರ್ ಲಿಂಕ್ ವಿವಾದದ ಕುರಿತು ಮಸ್ಕ್ ಅವರ ಹೇಳಿಕೆಗಳಿಗೆ ದುಬೆ ಈ ಹಿಂದೆಯೂ ತಿರುಗೇಟು ನೀಡಿದ್ದರು. ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಿಗೆ ಪ್ರತಿಕ್ರಿಯೆಯಾಗಿ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಭಾರತ ತನ್ನ ಭದ್ರತಾ ನೀತಿಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದರು.
ರವಿವಾರ Xನಲ್ಲಿ ಪ್ರಕಟಿಸಿದ್ದ ಪೋಸ್ಟ್ ನಲ್ಲಿ, ಸ್ಟಾರ್ ಲಿಂಕ್ ಸೇವೆಯ ಆಗಮನವು ಭಾರತದ ಭದ್ರತಾ ಸಂಸ್ಥೆಗಳಿಗೆ ಸವಾಲುಗಳನ್ನು ಒಡ್ಡಿದೆ ಎಂದು ದುಬೆ ಆರೋಪಿಸಿದ್ದರು. ಈ ಕುರಿತು ಭದ್ರತಾ ಸಂಸ್ಥೆಗಳು ವ್ಯಕ್ತಪಡಿಸಿರುವ ಆತಂಕಗಳನ್ನು ಸಂಸದೀಯ ಸಮಿತಿ ಪರಿಶೀಲಿಸಿದೆ ಎಂದೂ ತಿಳಿಸಿದ್ದರು.
'ಈ ಬೆದರಿಕೆಗಳ ಅಪಾಯಕಾರಿ ಆಟದಿಂದ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ನಮ್ಮ ತನಿಖಾ ಸಂಸ್ಥೆಗಳ ಮೇಲೆ ಪರಿಣಾಮ ಉಂಟಾಗುತ್ತಿದೆ' ಎಂದು ಅವರು ಬರೆದಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರವು 2013-14ರಲ್ಲೇ ಇಂತಹ ಬೆದರಿಕೆಗಳ ಬಗ್ಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಎಚ್ಚರಿಕೆ ನೀಡಿತ್ತು ಎಂದೂ ದುಬೆ ಪ್ರತಿಪಾದಿಸಿದ್ದರು.
ಭಾರತವನ್ನು ಟೀಕಿಸುವ ಮೊದಲು ಅಮೆರಿಕದಲ್ಲಿ ಇಂಟರ್ನೆಟ್ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವತ್ತ ಗಮನಹರಿಸುವಂತೆ ಮಸ್ಕ್ ಅವರನ್ನು ದುಬೆ ಟೀಕಿಸಿದ್ದರು.
'ಭಾರತ ಆರೋಗ್ಯಕರ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ರಾಷ್ಟ್ರವಾಗಿದೆ. ಅದು ಒತ್ತಡಕ್ಕೆ ಮಣಿದು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ ಗಳ ಕಾರಣಕ್ಕೆ ತನ್ನ ಭದ್ರತಾ ನೀತಿಯನ್ನು ಬದಲಾಯಿಸುವುದಿಲ್ಲ' ಎಂದು ಅವರು ಹೇಳಿದ್ದರು.
ಸ್ಟಾರ್ ಲಿಂಕ್ ಕುರಿತ ಸರಕಾರದ ನಿರ್ಧಾರವು ಕೇವಲ ಆರ್ಥಿಕ ಅಂಶಗಳನ್ನು ಆಧರಿಸಿರುವುದಿಲ್ಲ. ನಮ್ಮ ನೀತಿಯು ಹಣದ ಆಧಾರದ ಮೇಲೆ ನಿರ್ಧಾರವಾಗುತ್ತಿದ್ದರೆ, ಭದ್ರತಾ ಸಂಸ್ಥೆಗಳ ವಿರೋಧವಿದ್ದರೂ ನಿಮಗೆ ಭವ್ಯ ಸ್ವಾಗತ ನೀಡುತ್ತಿದ್ದೆವು ಎಂದು ಮಸ್ಕ್ ಅವರನ್ನು ಉದ್ದೇಶಿಸಿ ಹೇಳಿದ್ದರು.
ಇದಕ್ಕೆ ವ್ಯತಿರಿಕ್ತವಾಗಿ, ಸ್ಟಾರ್ ಲಿಂಕ್ ಸೇವೆಯಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಲಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ. ಸ್ಪರ್ಧೆಯಿಂದ ಸಾಮಾನ್ಯ ಭಾರತೀಯ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಇದರಿಂದ ಮುಕೇಶ್ ಅಂಬಾನಿ ಅವರ ಲಾಭ ಕಡಿಮೆಯಾಗಬಹುದೇ ಹೊರತು, ಅವರ ವ್ಯವಹಾರ ಸ್ಥಗಿತಗೊಳ್ಳುವುದಿಲ್ಲ ಎಂದು ಮಸ್ಕ್ ಪ್ರತಿಕ್ರಿಯಿಸಿದ್ದರು.



