ಸ್ವತಂತ್ರ ಪತ್ರಕರ್ತರಿಗೆ ನಿಷೇಧದ ಭೀತಿ
22 ವರ್ಷದ ವಿದ್ಯಾರ್ಥಿನಿ ಶುಭಾಂಗಿ ದಾಸ್ ಗುಪ್ತಾ ಇತ್ತೀಚೆಗೆ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ.
ಅಕ್ಟೋಬರ್ 12ರಂದು ಸ್ಥಳೀಯ ಐಟಿ ನಿಯಮಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪದ ಮೇಲೆ ಭಾರತದಲ್ಲಿ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್ (@shubhangi_decodes) ತಾತ್ಕಾಲಿಕವಾಗಿ ನಿರ್ಬಂಧಿಸಲಾಯಿತು. ಈ ಖಾತೆಯು 38,000ಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದೆ.
ಆಲ್ಟ್ ನ್ಯೂಸ್ ಶುಭಾಂಗಿಯನ್ನು ಸಂಪರ್ಕಿಸಿದಾಗ, ಇದು ತಾನು ಅಷ್ಟು ಹತ್ತಿರದಿಂದ ಕಂಡು ದಾಖಲಿಸಿದ ಮೊದಲ ಪ್ರತಿಭಟನೆ ಎಂದು ತಿಳಿಸಿದರು. "ಭಾರತದಲ್ಲಿ ನನ್ನ ವೀಕ್ಷಕರಿಗೆ ನನ್ನ ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂಬುದು ನನಗೆ ತಿಳಿದಿಲ್ಲ. ನನಗೆ ಮೊದಲು ತಿಳಿದಾಗ ಬೇಸರವಾಯಿತು. ನನ್ನ ಕೆಲಸವನ್ನು ಈ ರೀತಿ ನಿರಂಕುಶವಾಗಿ ಹತ್ತಿಕ್ಕಬಹುದು ಎಂದು ನನಗೆ ನಂಬಲು ಆಗಲಿಲ್ಲ. ಮರುದಿನ ಬೆಳಗಿನ ವೇಳೆಗೆ ನನ್ನಲ್ಲಿದ್ದ ಭಾವನೆ ಸಂಪೂರ್ಣವಾಗಿ ಕೋಪವಾಗಿ ಬದಲಾಯಿತು" ಎಂದು ಅವರು ಹೇಳಿದರು.
ಶುಭಾಂಗಿ ಅವರು ಅಕ್ಟೋಬರ್ 13ರಂದು ಇನ್‌ಸ್ಟಾಗ್ರಾಮ್ ನಿಂದ ತಮಗೆ ಬಂದ ಮತ್ತೊಂದು ನೋಟಿಸ್ ಬಗ್ಗೆ 'ಆಲ್ಟ್ ನ್ಯೂಸ್'ಗೆ ಮಾಹಿತಿ ನೀಡಿದರು. ಈ ಬಾರಿ ಅದು ಅವರ ಬ್ಯಾಕಪ್ ಖಾತೆಗೆ (@shubhangi_dg_) ಬಂದಿತ್ತು. "ನಿಷೇಧಿತ ವಾಣಿಜ್ಯ ಅಭ್ಯಾಸಗಳ" ಕುರಿತ ಮೆಟಾದ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶುಭಾಂಗಿ ಅವರಿಗೆ ಒಂದು ತಿಂಗಳ ಕಾಲ ಸಂದೇಶ ಕಳುಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಆ ನೋಟಿಸ್ ತಿಳಿಸಿದೆ.
ಹೆಚ್ಚಿನ ವಿವರಗಳು ಲಭ್ಯವಿಲ್ಲದಿದ್ದರೂ, ಪ್ರತಿಭಟನೆ ಮತ್ತು ಪೊಲೀಸ್ ದೌರ್ಜನ್ಯವನ್ನು ವರದಿ ಮಾಡಲು ತಮ್ಮ ಫಾಲೋವರ್ ಗಳಿಂದ ಗಳಿಂದ ಹಣಕಾಸಿನ ನೆರವು ಕೋರಿ ಪಾವತಿ ಲಿಂಕ್ ಹಂಚಿಕೊಂಡಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ಶುಭಾಂಗಿ ಹೇಳುತ್ತಾರೆ.
ಅದೇ ರೀತಿ, ಸ್ವತಂತ್ರ ಪತ್ರಕರ್ತೆ ಮುಸ್ಕಾನ್ ಅಗರ್ವಾಲ್ ಅವರು ತಮ್ಮ @muskan_informs ಹ್ಯಾಂಡಲ್ ನಿಂದ ಅಪ್‌ಲೋಡ್ ಮಾಡಿದ್ದ ರೀಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ಬಂಧಿಸಲಾಗಿದೆ. ಆ ರೀಲ್‌ನ ಶೀರ್ಷಿಕೆಯಲ್ಲಿ "Protesters detained in CP | 11 October 7 PM" ಎಂದು ಬರೆಯಲಾಗಿತ್ತು.
ಈ ವಿಡಿಯೊವನ್ನು 'ಎಕ್ಸ್' ಜಾಲತಾಣದಲ್ಲಿ ವೀಕ್ಷಿಸಬಹುದು. ಅಕ್ಟೋಬರ್ 11ರ ಸಂಜೆ ಕನ್ನಾಟ್ ಪ್ಲೇಸ್ ನಿಂದ ಮುಸ್ಕಾನ್ ನೇರ ವರದಿ ಮಾಡುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಹೆಚ್ಚಾಗುತ್ತಿದ್ದರೂ, ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ವ್ಯಕ್ತಿಗಳು ತಾವು ಇದ್ದ ವ್ಯಾನ್ ನ ಗಾಜಿನ ಕಿಟಕಿಯನ್ನು ಒಡೆದಿದ್ದಾರೆ ಎಂದು ಅವರು ತಿಳಿಸುತ್ತಾರೆ.
ಅಕ್ಟೋಬರ್ 11ರ ಸಂಜೆ ಮುಸ್ಕಾನ್ ಅಪ್‌ಲೋಡ್ ಮಾಡಿರುವ ಇತರ ಕೆಲವು ವಿಡಿಯೊಗಳು ಮಹಿಳಾ ಪ್ರತಿಭಟನಾಕಾರರನ್ನು ಬಲವಂತವಾಗಿ ವಶಕ್ಕೆ ಪಡೆದಿರುವುದನ್ನು ತೋರಿಸುತ್ತವೆ. ಆ ಸಂದರ್ಭದಲ್ಲಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಮಹಿಳಾ ಪ್ರತಿಭಟನಾಕಾರರು ಆರೋಪಿಸುತ್ತಿರುವುದೂ ಅವುಗಳಲ್ಲಿ ಕಂಡುಬರುತ್ತದೆ.
ಪ್ರೊಫೈಲ್ ಗಳ ತೆಗೆದುಹಾಕುವಿಕೆ
ಸುದ್ದಿ ಮಾಧ್ಯಮ 'ಜರ್ನೋ ಮಿರರ್' (@journomirror)ನ ಇನ್‌ಸ್ಟಾಗ್ರಾಮ್ ಪುಟವನ್ನು ಅಕ್ಟೋಬರ್ 13ರಂದು ಭಾರತದಲ್ಲಿ ಮೆಟಾ ನಿರ್ಬಂಧಿಸಿದೆ ಎಂದು ಆ ಮಾಧ್ಯಮ ಸಂಸ್ಥೆಯು 'ಎಕ್ಸ್' ಜಾಲತಾಣದಲ್ಲಿ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದೆ.
ಅಕ್ಟೋಬರ್ 13ರಂದು ಅದರ ಸಂಪಾದಕೀಯ ತಂಡ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸ್ವತಂತ್ರ ಪತ್ರಕರ್ತರ ವರದಿಗಾರಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದೊಡ್ಡ ಪ್ರಯತ್ನದ ಭಾಗವಾಗಿ ಈ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ.
ಆಲ್ಟ್ ನ್ಯೂಸ್ 'ಜರ್ನೋ ಮಿರರ್'ನ ಸಹ-ಸಂಸ್ಥಾಪಕ ಮತ್ತು ಸಂಪಾದಕ ಮುಹಮ್ಮದ್ ಅಲಿ ಅವರೊಂದಿಗೆ ಮಾತನಾಡಿದೆ. ಅಮಾನತುಗೊಳಿಸಲು ಕಾರಣವೇನು ಎಂದು ತಿಳಿಸಿ ಮೆಟಾದಿಂದ ಯಾವುದೇ ಇಮೇಲ್ ಅಥವಾ ಅಧಿಸೂಚನೆ ಬಂದಿಲ್ಲ ಎಂದು ಅವರು ತಿಳಿಸಿದರು. "ಅಕ್ಟೋಬರ್ 12ರ ರಾತ್ರಿ 10.30ರ ಸುಮಾರಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಪುಟವು ಲಭ್ಯವಿಲ್ಲ ಎಂದು ಪರಿಚಯಸ್ಥರೊಬ್ಬರು ನನಗೆ ತಿಳಿಸಿದರು. ನಮಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಪ್ರತಿಭಟನೆಯ ಕುರಿತು ನಮ್ಮ ಇತ್ತೀಚಿನ ವರದಿಯೇ ಈ ನಿಷೇಧದ ಹಿಂದಿನ ಕಾರಣವಾಗಿರಬಹುದು" ಎಂದಿದ್ದಾರೆ ಅವರು.
ಇದಕ್ಕೂ ಮುನ್ನ 'ಜರ್ನೋ ಮಿರರ್' ಪ್ರಕಟಿಸಿದ್ದ ಮೂರು ಪೋಸ್ಟ್‌ಗಳನ್ನು ಪ್ಲಾಟ್‌ಫಾರ್ಮ್ ಭಾರತದಲ್ಲಿ ನಿರ್ಬಂಧಿಸಿದೆ. ಈ ಮೂರೂ ಪೋಸ್ಟ್ ಗಳಲ್ಲಿ ಪ್ರತಿಭಟನೆಯ ಸ್ಥಳದಿಂದ ಮಾಡಲಾದ ವರದಿಗಳಿದ್ದವು. ಅವುಗಳಲ್ಲಿ ಒಂದರಲ್ಲಿ, ಪೊಲೀಸರು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ವರ್ತಿಸಿದ್ದಾರೆ ಎಂದು ವಶಕ್ಕೆ ತೆಗೆದುಕೊಂಡ ಪ್ರತಿಭಟನಾಕಾರರೊಬ್ಬರು ಆರೋಪಿಸಿರುವುದು ಕಂಡುಬಂದಿದೆ.
ವಿಪಿಎನ್ (VPN) ಸೇವೆಗಳನ್ನು ಬಳಸಿ ನಾವು ಆ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಹೊಸದಿಲ್ಲಿಯ ಪ್ರತಿಭಟನೆಯ ಬಗ್ಗೆ ಸಾಕಷ್ಟು ವರದಿಗಳು ಕಂಡುಬಂದವು. ಅದರಲ್ಲಿ ಪ್ರತಿಭಟನಾಕಾರರ ನೇರ ಹೇಳಿಕೆಗಳು ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಹಿಂಸಾತ್ಮಕ ವಿಧಾನಗಳನ್ನು ಬಳಸುವುದನ್ನು ತೋರಿಸುವ ವಿಡಿಯೊಗಳು ಸೇರಿವೆ ಎಂದು ಆಲ್ಟ್ ನ್ಯೂಸ್ ವರದಿ ಉಲ್ಲೇಖಿಸಿದೆ.
ಇದೇ ರೀತಿ, ಅಕ್ಟೋಬರ್ 10ರಂದು 'ಮಾಲಿಟಿಕ್ಸ್ ಇಂಡಿಯಾ' (@moliticsindia) ಇನ್‌ಸ್ಟಾಗ್ರಾಮ್ ಖಾತೆಯನ್ನೂ ನಿರ್ಬಂಧಿಸಲಾಗಿದೆ.
ವಿಡಿಯೊ ಹೇಳಿಕೆ ನೀಡಿರುವ 'ಮಾಲಿಟಿಕ್ಸ್ ಇಂಡಿಯಾ'ದ ನಿರ್ದೇಶಕ ಹಾಗೂ ಪ್ರಧಾನ ಸಂಪಾದಕ ನೀರಜ್ ಝಾ, "ನಾವು ನಿಮಗೆ ಸುದ್ದಿಯನ್ನು ತಲುಪಿಸಿದ್ದಕ್ಕೆ, ವರದಿ ಮಾಡಿದ್ದಕ್ಕೆ ಹಾಗೂ ಸ್ಥಳದಿಂದ ವರದಿ ಮಾಡಿದ್ದಕ್ಕೆ ನಮಗೆ ಈ ಶಿಕ್ಷೆ ನೀಡಲಾಗಿದೆ" ಎಂದು ಹೇಳಿದ್ದಾರೆ.
कायर सरकार कैसी होती है - ये देखना हो तो आज का भारत देखिए। लोगों को प्रोटेस्ट नहीं करने दिया जा रहा। पत्रकारों को रिपोर्ट नहीं करने दिया जा रहा।
@moliticsindia का इंस्टाग्राम अकाउंट कानूनी कारणों से भारत में प्रतिबंधित कर दिया गया है। ऐसे बनेंगे विश्वगुरु? #SupportMolitics