ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಅಕ್ಟೋಬರ್ 23ರಿಂದ ದೇಶಾದ್ಯಂತ ಜನಾಂದೋಲನ ನಡೆಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಘೋಷಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳಿಗೂ ಹೋರಾಟವನ್ನು ವಿಸ್ತರಿಸಲು ಸಿಜೆಪಿ ನಿರ್ಧರಿಸಿದೆ. ಈ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸುವುದಾಗಿ ತಿಳಿಸಿದೆ.
'ಅಕ್ಟೋಬರ್ 23ರಿಂದ ಪ್ರತಿರೋಧದ ಹೋರಾಟ ಆರಂಭವಾಗಲಿದೆ. ರೈತರು, ದಲಿತರು, ವಿದ್ಯಾರ್ಥಿಗಳು ಹಾಗೂ Gen Z ಗಳು ಈ ಜನಾಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಸಿಜೆಪಿ ಹೇಳಿದೆ.
ಎಸ್ಐಆರ್ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಈಗಾಗಲೇ ಪುರಾವೆಗಳನ್ನು ಸಲ್ಲಿಸಲಾಗಿದೆ. ಇದೀಗ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪ್ರಮುಖ ಪ್ರತಿಭಟನೆ ನಡೆದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.
ಪ್ರತಿಭಟನೆಗೆ ಪೊಲೀಸ್ ತಡೆ
ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ವ್ಯಾಪಕ ಕ್ರಮ ಕೈಗೊಂಡಿದ್ದರು. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಸಂಘಟನೆಯ ನಾಯಕರನ್ನು ಜಂತರ್ ಮಂತರ್ ತಲುಪುವ ಮೊದಲೇ ಬಂಧಿಸಲಾಗಿತ್ತು. ದಿಲ್ಲಿಯಾದ್ಯಂತ ಸಾವಿರಾರು ಪ್ರತಿಭಟನಾಕಾರರನ್ನೂ ವಶಕ್ಕೆ ಪಡೆಯಲಾಗಿತ್ತು.
ಮಧ್ಯ ದಿಲ್ಲಿಯ ಹಲವು ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕ ಸಾರಿಗೆ ಮತ್ತು ಇಂಟರ್ನೆಟ್ ಸೇವೆಗಳ ಮೇಲೆಯೂ ನಿರ್ಬಂಧ ವಿಧಿಸಲಾಗಿತ್ತು. ಜಂತರ್ ಮಂತರ್ನಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರಿಂದ ಪ್ರತಿಭಟನಾಕಾರರು ಕನ್ನಾಟ್ ಪ್ಲೇಸ್, ದಿಲ್ಲಿ ಹಾತ್ ಮತ್ತು ರಾಜ್ ಘಾಟ್ ಸೇರಿದಂತೆ ವಿವಿಧೆಡೆ ಸಣ್ಣ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತದಾರರ ಹೆಸರು ಅಳಿಸಿದ ಆರೋಪ
ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪಗಳು ಪ್ರತಿಭಟನೆಗೆ ಪ್ರಮುಖ ಕಾರಣವಾಗಿವೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಕೈಗೊಂಡಿರುವ ಎಸ್ಐಆರ್ಗೆ ಸಂಬಂಧಿಸಿದ ಹಲವು ನಿರ್ಧಾರಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತನಿಖಾ ವರದಿ ತಿಳಿಸಿದೆ. ಈ ಬೆಳವಣಿಗೆಯೂ ಪ್ರತಿಭಟನೆಗೆ ತಕ್ಷಣದ ರಾಜಕೀಯ ಪ್ರಚೋದನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಚುನಾವಣಾ ಆಯೋಗವು ತನ್ನ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿದೆ.



