ಕೊಚ್ಚಿ: ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಸಮೀಪದ ಪುಳಿಂಕುಡಿ ಕಡಲತೀರದಲ್ಲಿ ವಿಐಎಸ್‌ಎಲ್ ವತಿಯಿಂದ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಗೆ ಕೇರಳ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮಧ್ಯಂತರ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ.ಎಂ. ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ವಿಐಎಸ್‌ಎಲ್ ಮತ್ತು ಅದಾನಿ ವಿಳಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕೈಗೊಂಡಿರುವ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಪರಿಸರ ಅನುಮತಿ ದೊರೆತಿದೆಯೇ ಎಂಬುದನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಪೀಠ ಗಮನಿಸಿದೆ.
ಪುಳಿಂಕುಡಿ ಕಡಲತೀರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳು ವಿಐಎಸ್‌ಎಲ್‌ನ ಅಸ್ತಿತ್ವದಲ್ಲಿರುವ ಅಥವಾ ಪ್ರಸ್ತಾವಿತ ಮಾಸ್ಟರ್ ಪ್ಲಾನ್‌ನ ಭಾಗವಾಗಿಲ್ಲ ಎಂದು ಮೂರನೇ ಪ್ರತಿವಾದಿಯಾದ ಕೇರಳ ಕರಾವಳಿ ವಲಯ ನಿರ್ವಹಣಾ ಸಮಿತಿ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ. ಅಲ್ಲದೆ, ಕೇಂದ್ರ ಪರಿಸರ ಸಚಿವಾಲಯ ನೀಡಿರುವ ಅನುಮತಿಯಲ್ಲೂ ಈ ಕಾಮಗಾರಿಗಳನ್ನು ಸೇರಿಸಲಾಗಿಲ್ಲ ಎಂಬ ವಾದವನ್ನು ಮಂಡಿಸಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಗಿದೆ.



