ನವದೆಹಲಿ: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮತ್ತೆ ತೀವ್ರಗೊಂಡಿದೆ. ಪ್ರಕರಣದಲ್ಲಿ ಪ್ರಸ್ತಾಪವಾಗಿರುವ 'ವಿಐಪಿ' ಯಾರೆಂಬುದು ಇನ್ನೂ ಬಹಿರಂಗವಾಗದಿರುವಾಗಲೇ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನೇಮಕಾತಿಯನ್ನು ಮರುಪರಿಶೀಲಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದಾರೆ.
ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅವರು ಅಧಿಕಾರ ವಹಿಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
'ಎಕ್ಸ್'ನಲ್ಲಿ ಹಂಚಿಕೊಂಡ ಪತ್ರದಲ್ಲಿ, 19 ವರ್ಷದ ಅಂಕಿತಾ ಭಂಡಾರಿ ಹತ್ಯೆಯಾಗಿ ಸುಮಾರು ನಾಲ್ಕು ವರ್ಷಗಳು ಕಳೆದಿದ್ದರೂ, ಪ್ರಕರಣದಲ್ಲಿ ಪ್ರಸ್ತಾಪವಾಗಿರುವ 'ವಿಐಪಿ' ಯಾರೆಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಈ ಆಯಾಮದ ಕುರಿತು ಸಿಬಿಐ ನಡೆಸುತ್ತಿರುವ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿರುವ ಅವರು, ತನಿಖೆ ಪೂರ್ಣಗೊಳ್ಳುವ ಮೊದಲೇ ಗೌತಮ್ ಅವರಿಗೆ ರಾಜ್ಯಪಾಲರ ಹುದ್ದೆ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
"ಗೌರವಾನ್ವಿತ ರಾಷ್ಟ್ರಪತಿಗಳೇ, 19 ವರ್ಷದ ಅಂಕಿತಾ ಭಂಡಾರಿ ಅವರು ಒಬ್ಬ 'ವಿಐಪಿ'ಗಾಗಿ ತಮ್ಮ ಘನತೆಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಇದೇ ಕಾರಣಕ್ಕೆ ಅವರ ಹತ್ಯೆಯಾಯಿತು. ನಾಲ್ಕು ವರ್ಷಗಳು ಕಳೆದರೂ, ಸಿಬಿಐನ ನಿಧಾನಗತಿಯ ತನಿಖೆಯಿಂದಾಗಿ ಆ 'ವಿಐಪಿ' ಯಾರೆಂಬ ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ" ಎಂದು ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.
ಅಂಕಿತಾ ಅವರ ಕುಟುಂಬ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಗೌತಮ್ ಅವರ ನಂಟಿರಬಹುದು ಎಂದು ನಂಬಿದ್ದಾರೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಆದರೆ, ಗೌತಮ್ ಅವರ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ.
ರಾಜ್ಯಪಾಲರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಭವಿಷ್ಯದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳುವುದು ಕಷ್ಟವಾಗಬಹುದು ಎಂಬ ಆತಂಕವನ್ನು ರಾಹುಲ್ ವ್ಯಕ್ತಪಡಿಸಿದ್ದಾರೆ. ಸಂವಿಧಾನದ 74(1)ನೇ ವಿಧಿಯನ್ನು ಉಲ್ಲೇಖಿಸಿರುವ ಅವರು, ಸರ್ಕಾರದ ಸಲಹೆಯನ್ನು ಮರುಪರಿಶೀಲಿಸುವಂತೆ ರಾಷ್ಟ್ರಪತಿಗಳು ಸರ್ಕಾರಕ್ಕೆ ಸೂಚಿಸಬಹುದು ಎಂದು ಹೇಳಿದ್ದಾರೆ.
"ಈ ನೇಮಕಾತಿಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು. ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅವರು ಅಧಿಕಾರ ವಹಿಸಿಕೊಳ್ಳದಂತೆ ನೋಡಿಕೊಳ್ಳಬೇಕು" ಎಂದು ಅವರು ಮನವಿ ಮಾಡಿದ್ದಾರೆ.
ಅಂಕಿತಾ ಅವರ ಪೋಷಕರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನೂ ಪತ್ರದಲ್ಲಿ ಪ್ರಸ್ತಾಪಿಸಿರುವ ರಾಹುಲ್, ಅಸಹ್ಯಕರ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕಾಗಿ ಅಂಕಿತಾ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಉಲ್ಲೇಖಿಸಿ, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅವರಿಗೆ ಸಾಂತ್ವನ ನೀಡಬೇಕು ಹಾಗೂ ರಾಜ್ಯಪಾಲರ ಹುದ್ದೆಯ ಘನತೆಯನ್ನು ಕಾಪಾಡಬೇಕು ಎಂದು ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿರುವ ರಾಹುಲ್, ಗೌತಮ್ ಅವರ ನೇಮಕಾತಿಗೆ ಶಿಫಾರಸು ಮಾಡುವ ಮೂಲಕ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಧಾನಿ ಅವರಿಗೆ ಕಾಳಜಿಯಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅಧಿಕಾರ ವಹಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಮತ್ತು ಅಂಕಿತಾ ಅವರ ಪೋಷಕರ ನ್ಯಾಯದ ನಿರೀಕ್ಷೆ ಹುಸಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನೇಮಕ ರದ್ದುಗೊಳಿಸಲು 24 ಗಂಟೆಗಳ ಗಡುವು:
ದಿಲ್ಲಿಯ ಇಂಡಿಯಾ ಗೇಟ್ ಬಳಿ ಗೌತಮ್ ಅವರ ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅಂಕಿತಾ ಅವರ ಪೋಷಕರನ್ನು ರಾಹುಲ್ ಭೇಟಿಯಾದ ಮರುದಿನವೇ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಗುರುವಾರ ನಡೆದ ಪ್ರತಿಭಟನೆಯ ವೇಳೆ ದಿಲ್ಲಿ ಪೊಲೀಸರು ಕುಟುಂಬದ ಸದಸ್ಯರು ಮತ್ತು ವಿರೋಧ ಪಕ್ಷದ ಹಲವು ನಾಯಕರನ್ನು ಕೆಲಕಾಲ ವಶಕ್ಕೆ ಪಡೆದಿದ್ದರು.
ಅಂಕಿತಾ ಅವರ ತಂದೆ ವೀರೇಂದ್ರ ಸಿಂಗ್ ಭಂಡಾರಿ ಅವರು ನೇಮಕಾತಿ ರದ್ದುಗೊಳಿಸಲು ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
"ನಾವು ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡುತ್ತಿದ್ದೇವೆ. ದುಷ್ಯಂತ್ ಗೌತಮ್ ಅವರ ನೇಮಕಾತಿಯನ್ನು ರದ್ದುಗೊಳಿಸದಿದ್ದರೆ, ಅಂಕಿತಾ ಭಂಡಾರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ದೇಶದಾದ್ಯಂತ, ಪ್ರತಿ ರಾಜ್ಯದಲ್ಲಿಯೂ ಜನರು ಬೀದಿಗಿಳಿದು ಹೋರಾಡಲಿದ್ದಾರೆ" ಎಂದು ಅವರು ಐಎಎನ್‌ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಋಷಿಕೇಶದ ಸಮೀಪದ ವನಂತರ ರೆಸಾರ್ಟ್ ನಲ್ಲಿ ರಿಸಿಪ್ಷನಿಸ್ಟ್ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಅವರನ್ನು 2022ರ ಸೆಪ್ಟೆಂಬರ್ 18ರಂದು ಹತ್ಯೆ ಮಾಡಲಾಗಿತ್ತು. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಇಬ್ಬರು ಉದ್ಯೋಗಿಗಳು ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿದ್ದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.



