ಕಾಸರಗೋಡು: ರೈಲು ಪ್ರಯಾಣದ ಮಧ್ಯೆ ಯುವಕ ರಕ್ತವಾಂತಿಯಿಂದ ಮೃತಪಟ್ಟಿದ್ದಾರೆ. ಬಿಹಾರದ ಸೌಸಾ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶಹನ್‍ಬಾಜ್ (18)ಮೃತಪಟ್ಟ ಯುವಕ. ತನ್ನ ಸ್ನೇಹಿತರ ಜೊತೆ ನೇತ್ರಾವತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಮಂಗಳೂರಿನಿಂದ ತ್ರಿಶೂರಿಗೆ ಪ್ರಯಾಣಿಸುತ್ತಿದ್ದ ಹಾದಿ ಮಧ್ಯೆ ಶಹನಾಝ್‍ಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಅನಂತರ ರಕ್ತವಾಂತಿಯಾಗಿ ಅಬೋಧಾವಸ್ಥೆಗೆ ಜಾರಿದ್ದರು. ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ರೈಲ್ವೇ ಭದ್ರತಾ ಪಡೆ ತಕ್ಷಣ ಇವರನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ರೈಲ್ವೇ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


