HEALTH TIPS

'ಅರ್ನಾಬ್' ಚಂಡಮಾರುತ| ಒಡಿಶಾ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕಟ್ಟೆಚ್ಚರ

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರಗೊಂಡು ಚಂಡಮಾರುತವಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತದ ದಕ್ಷಿಣ ಮತ್ತು ಪೂರ್ವ ಕರಾವಳಿ ರಾಜ್ಯಗಳಾದ ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. 


ಈ ಚಂಡಮಾರುತಕ್ಕೆ 'ಅರ್ನಾಬ್' ಎಂದು ಹೆಸರಿಡಲಾಗಿದ್ದು, ಅಕ್ಟೋಬರ್ 28ರಂದು ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.

'ಅರ್ನಾಬ್' ಹೆಸರನ್ನು ಬಾಂಗ್ಲಾದೇಶವು ನೀಡಿದ್ದು, ಬಂಗಾಳಿ ಭಾಷೆಯಲ್ಲಿ 'ಮಹಾಸಾಗರ' ಎಂಬ ಅರ್ಥವನ್ನು ಹೊಂದಿದೆ.

ವಾಯುಭಾರ ಕುಸಿತವು ಅ.26ರ ಬೆಳಿಗ್ಗೆ ಚಂಡಮಾರುತವಾಗಿ ತೀವ್ರಗೊಳ್ಳಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಆಂಧ್ರದ ಮೇಲೆ ಚಂಡಮಾರುತದ ನೇರ ಪರಿಣಾಮ

ಚಂಡಮಾರುತವು ಅ.28ರಂದು ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಬಿರುಗಾಳಿಯ ವೇಗ 140 ಕಿ.ಮೀ.ವರೆಗೆ ತಲುಪಬಹುದು ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಭಾರೀ ಮಳೆ ಮತ್ತು ಗಾಳಿಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಆಡಳಿತವು ಸಜ್ಜಾಗಿದೆ.

ಒಡಿಶಾದಲ್ಲಿ ವ್ಯಾಪಕ ಸಿದ್ಧತೆ, ರಜೆ ಘೋಷಣೆ:

ಒಡಿಶಾದಲ್ಲಿ ಅ.27 ಮತ್ತು 29ರ ನಡುವೆ ಗುಡುಗು-ಸಿಡಿಲು ಮತ್ತು ಗಂಟೆಗೆ 60ರಿಂದ 70 ಕಿ.ಮೀ.ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.

ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು 'ಶೂನ್ಯ ಸಾವು-ನೋವು' ಗುರಿಯೊಂದಿಗೆ ತುರ್ತು ರಕ್ಷಣಾ ಕ್ರಮಗಳಿಗೆ ಆದೇಶಿಸಿದ್ದಾರೆ. ಚಂಡಮಾರುತದ ಅತ್ಯಂತ ಹೆಚ್ಚಿನ ಪರಿಣಾಮವನ್ನು ನಿರೀಕ್ಷಿಸಲಾಗಿರುವ ರಾಯಗಢ, ಕೊರಾಪಟ್, ಮಲ್ಕನ್‌ಗಿರಿ, ಗಂಜಾಂ ಮತ್ತು ಗಜಪತಿ ಜಿಲ್ಲೆಗಳಲ್ಲಿ ಅ.28 ಮತ್ತು 29ರಂದು ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಈ ಐದು ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಹೊರಡಿಸಿದೆ.

ತುರ್ತು ರಕ್ಷಣಾ ಕಾರ್ಯಕ್ಕಾಗಿ ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ (ಒಆರ್‌ಡಿಎಎಫ್) 60,ಎನ್‌ಡಿಆರ್‌ಎಫ್‌ನ 17 ಹಾಗೂ ಅಗ್ನಿಶಾಮಕ ದಳದ 225 ತಂಡಗಳನ್ನು ನಿಯೋಜಿಸಲಾಗಿದೆ. ಗಂಜಾಂ ಒಂದರಲ್ಲೇ 100 ಚಂಡಮಾರುತ ಆಶ್ರಯ ತಾಣಗಳನ್ನು ಸಜ್ಜುಗೊಳಿಸಲಾಗಿದ್ದು, ತೆರವು ಕಾರ್ಯಾಚರಣೆ ಅಗತ್ಯವಾದರೆ ಜನರಿಗೆ ಸ್ಥಳಾವಕಾಶ ಕಲ್ಪಿಸಲು 1,000 ತಾತ್ಕಾಲಿಕ ಸ್ಥಳಗಳನ್ನು ಗುರುತಿಸಲಾಗಿದೆ. ಸರಕಾರಿ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದ್ದು, ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

ತಮಿಳುನಾಡು ಬಂದರುಗಳಲ್ಲಿ ಎಚ್ಚರಿಕೆ:

ನಿರಂತರ ಮಳೆಯಿಂದಾಗಿ ತಮಿಳುನಾಡಿನ ಕೆಲವು ಭಾಗಗಳು ಜಲಾವೃತಗೊಂಡಿದ್ದು, ಚೆನ್ನೈ, ನಾಗಪಟ್ಟಿಣಂ, ಕುಡ್ಡಲೂರು, ಕಾರೈಕಲ್, ಪಾಂಬನ್ ಮತ್ತು ತೂತುಕುಡಿ ಸೇರಿದಂತೆ ಒಟ್ಟು 9 ಬಂದರುಗಳಲ್ಲಿ ಚಂಡಮಾರುತದ ಎಚ್ಚರಿಕೆ ಸೂಚಕಗಳನ್ನು ಅಳವಡಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರಿಗೆ ಕಡಲಿಗಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪುದುಚೇರಿಯಲ್ಲಿ ಜಲಾವೃತಗೊಂಡ ರಸ್ತೆಗಳು

ಈಶಾನ್ಯ ಮಾನ್ಸೂನ್ ಸಕ್ರಿಯವಾಗಿರುವುದರಿಂದ ಪುದುಚೇರಿಯಲ್ಲಿ ಸತತ ಮಳೆಯಾಗುತ್ತಿದ್ದು, ಕೃಷ್ಣ ನಗರ ಮತ್ತು ಲಾಸ್ಪೇಟ್ ಸರಮ್ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನೀರು ಹೊರಹಾಕಲು ಸ್ಥಳೀಯ ಆಡಳಿತ ತಕ್ಷಣದ ಕ್ರಮ ಕೈಗೊಳ್ಳುತ್ತಿದೆ.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿದ್ಯುತ್, ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ತುರ್ತು ಸೇವೆಗಳಿಗೆ ಅಡಚಣೆಯಾಗದಂತೆ ಸಿದ್ಧವಾಗಿರಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries