ನವದೆಹಲಿ: 2024ರ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು 'ಇಂಡಿಯಾ' ಒಕ್ಕೂಟವನ್ನು ತೊರೆದ ವಿಚಾರವು ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ (ಸಿಡಬ್ಲುಸಿ) ಪ್ರಸ್ತಾಪವಾಗಿದೆ.
'ನಿತೀಶ್ ಕುಮಾರ್ ಅವರು ವಿಪಕ್ಷಗಳ ಒಕ್ಕೂಟವನ್ನು ತೊರೆಯದಂತೆ ನೋಡಿಕೊಳ್ಳಬೇಕಿತ್ತು' ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದರು.
ಆದರೆ, ಅವರು ಹೊರ ಹೋಗಿದ್ದೇ ಒಳ್ಳೆಯದಾಯಿತು. ಅವರು ವಿರೋಧ ಪಕ್ಷಗಳಿಗೆ ದ್ರೋಹ ಬಗೆದರು ಎಂಬುದಾಗಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹೇಳಿದರು' ಎಂದು ಮೂಲಗಳು ಹೇಳಿವೆ.
'ನಿತೀಶ್ ಕುಮಾರ್ 'ಇಂಡಿಯಾ' ಒಕ್ಕೂಟದಲ್ಲಿಯೇ ಇದ್ದಿದ್ದರೆ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬೇರೆಯೇ ಆಗಿರುತ್ತಿತ್ತು' ಎಂದು ದಿಗ್ವಿಜಯ ಸಿಂಗ್ ಹೇಳಿದರು. ಈ ಮಾತಿಗೆ ಸೋನಿಯಾ ಗಾಂಧಿ ಸಹಮತ ವ್ಯಕ್ತಪಡಿಸಲಿಲ್ಲ. 'ನಿತೀಶ್ ಕುಮಾರ್ 'ಇಂಡಿಯಾ' ಒಕ್ಕೂಟ ತೊರೆಯಲು ನಿರ್ಧರಿಸಿದ್ದರು. ಅವರು ಒಕ್ಕೂಟ ತೊರೆದಿದ್ದೇ ಒಳ್ಳೆಯದಾಯಿತು ಎಂದು ಸೋನಿಯಾ ಗಾಂಧಿ ಸಭೆಗೆ ತಿಳಿಸಿದರು' ಎಂದು ಇವೇ ಮೂಲಗಳು ಹೇಳಿವೆ.

