ಬರ್ಲಿನ್: ಜರ್ಮನಿಯ ಬೋಖುಮ್ ನಗರದ ವಸತಿ ಕಟ್ಟಡವೊಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಲಯಾಳಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಹೊಗೆ ಉಸಿರಾಡಿದ ಕಾರಣ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಇಡುಕ್ಕಿ ಜಿಲ್ಲೆಯ ಶಾಂತಿಗ್ರಾಮ್ ನಿವಾಸಿ ಸಾಬು ಅವರ ಪುತ್ರಿ ನೋವಾ ಸಾಬು (23), ಕೊಲ್ಲಂ ಜಿಲ್ಲೆಯ ಚಾಮಕ್ಕಾಡ್ ನಿವಾಸಿ ಅಂಜಲಿ ಜಾಯ್ (27) ಹಾಗೂ ಕಾಲಡಿ ನಿವಾಸಿ ಸಿವಿನ್ ಜೋನಿ (26) ಎಂದು ಗುರುತಿಸಲಾಗಿದೆ.
ನೋವಾ ಸಾಬು ಅವರು ತಾಯ್ನಾಡಿನಲ್ಲಿ ಜಿಮ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದಷ್ಟೇ ಜರ್ಮನಿಗೆ ತೆರಳಿ ಅಲ್ಲಿಯೂ ಜಿಮ್ ತರಬೇತುದಾರರಾಗಿ ಉದ್ಯೋಗ ಆರಂಭಿಸಿದ್ದರು.
ಬೋಖುಮ್ ನಗರದ ವಸತಿ ಕಟ್ಟಡದಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ವೇಗವಾಗಿ ಹರಡಿ ಮೆಟ್ಟಿಲುಗಳ ಮೇಲ್ಭಾಗಕ್ಕೂ ವ್ಯಾಪಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಕಟ್ಟಡದ ಒಳಗೆ ಪ್ರವೇಶಿಸಲು ತೊಂದರೆಯಾಯಿತು. ಇದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟಕರವಾಯಿತು ಎಂದು ವರದಿಯಾಗಿದೆ.
ಉದ್ದೇಶಪೂರ್ವಕ ಬೆಂಕಿ ಹಚ್ಚಿರುವ ಶಂಕೆ
ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿಂದೆ ಉದ್ದೇಶಪೂರ್ವಕ ಕೃತ್ಯವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಕಡಿಮೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೊಲೆ ಪ್ರಕರಣದ ಶಂಕೆಯ ಹಿನ್ನೆಲೆಯಲ್ಲಿ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯಾ ಪ್ರಜೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.



