HEALTH TIPS

ವಂಚನೆಗಳ ಬಗ್ಗೆ ಅನಿವಾಸಿಗಳಿಗೆ ಸಮಗ್ರ ಜಾಗೃತಿ ಅಗತ್ಯ: ಪ್ರವಾಸಿ ಆಯೋಗದ ಅಧ್ಯಕ್ಷೆ ನ್ಯಾಯಮೂರ್ತಿ ಸೋಫಿ ಥಾಮಸ್

ಕಾಸರಗೋಡು: ವಂಚನೆಗಳಿಗೆ ಬಲಿಯಾಗದಂತೆ ಅನಿವಾಸಿ ಭಾರತೀಯರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೇರಳ ಪ್ರವಾಸಿ ಆಯೋಗದ ಅಧ್ಯಕ್ಷೆ ನ್ಯಾಯಮೂರ್ತಿ ಸೋಫಿ ಥಾಮಸ್ ಹೇಳಿದರು.


ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರವಾಸಿ ಆಯೋಗದ ವಿಚಾರಣಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಹೆಚ್ಚಿನ ದೂರುಗಳು ಆರ್ಥಿಕ ವಂಚನೆಗಳಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದರು.

ವಿದೇಶಗಳಲ್ಲಿ ಪಾಲುದಾರಿಕೆ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಿ, ಬಳಿಕ ಹಣ ಮರಳಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ ಅನೇಕ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಆದರೆ, ಹಣ ವರ್ಗಾವಣೆ ಅಥವಾ ವ್ಯವಹಾರದ ಪಾಲುದಾರಿಕೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಹಲವರ ಬಳಿ ಇಲ್ಲ. ಅಷ್ಟೇ ಅಲ್ಲದೆ, ಆರೋಪಿಗಳ ನಿಖರ ವಿಳಾಸವೂ ದೂರುದಾರರಿಗೆ ತಿಳಿದಿರುವುದಿಲ್ಲ. ಇದರಿಂದ ಪೊಲೀಸರು ಪ್ರಕರಣ ದಾಖಲಿಸುವುದು ಹಾಗೂ ತನಿಖೆ ನಡೆಸುವುದು ಕಷ್ಟವಾಗುತ್ತಿದೆ. ಇಂತಹ ಪ್ರಕರಣಗಳನ್ನು ಪರಿಹರಿಸುವಲ್ಲಿ ಆಯೋಗಕ್ಕೂ ತೊಂದರೆ ಎದುರಾಗುತ್ತಿದೆ ಎಂದು ಅವರು ವಿವರಿಸಿದರು.

ರಾಯಭಾರ ಕಚೇರಿಗಳು ಹಾಗೂ ನೋರ್ಕಾ (NORKA) ಸೇರಿದಂತೆ ಲಭ್ಯವಿರುವ ವ್ಯವಸ್ಥೆಗಳ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಉದ್ಯೋಗ, ಶಿಕ್ಷಣದ ಹೆಸರಲ್ಲೂ ಲಕ್ಷಾಂತರ ರೂಪಾಯಿ ವಂಚನೆ

ವಿದೇಶಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳನ್ನು ಒದಗಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಹಲವು ಪ್ರಕರಣಗಳೂ ವಿಚಾರಣೆಗೆ ಬಂದಿವೆ. ಹಣ ಪಡೆದ ಬಳಿಕ ಏಜೆಂಟರು ತಮ್ಮ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಭಾವಿ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ನಂಬಿಸಿ ಇಂತಹ ವಂಚನೆಗಳನ್ನು ನಡೆಸಲಾಗುತ್ತಿದೆ ಎಂದು ಸೋಫಿ ಥಾಮಸ್ ಹೇಳಿದರು.

ವಿವಿಧ ಭರವಸೆಗಳನ್ನು ನೀಡಿ ಅನಿವಾಸಿಗಳಿಂದ ಹಣ ಪಡೆಯುವ ಕೆಲವು ಸಂಘಟನೆಗಳು ಹಾಗೂ ವಕೀಲರ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವ್ಯವಹಾರ ನಡೆಸುವ ಮೊದಲು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ನೋರ್ಕಾದ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಂಡು ಮಾಹಿತಿಯನ್ನು ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದರು.

ವಂಚನೆಗಳ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಮಾಧ್ಯಮಗಳ ಸಹಕಾರವೂ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಣ್ಣೂರು ವಿಮಾನ ನಿಲ್ದಾಣದ ಕುರಿತು ಕೇಂದ್ರಕ್ಕೆ ದೂರು

ಕಣ್ಣೂರು ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳಿದ್ದರೂ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವ ಕುರಿತು ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದು ಆಯೋಗದ ಅಧ್ಯಕ್ಷೆ ತಿಳಿಸಿದರು.

71 ದೂರುಗಳ ವಿಚಾರಣೆ

ಪ್ರವಾಸಿ ಆಯೋಗದ ವಿಚಾರಣಾ ಸಭೆಯಲ್ಲಿ 51 ಹಳೆಯ ದೂರುಗಳು ಹಾಗೂ 20 ಹೊಸ ದೂರುಗಳು ಸೇರಿದಂತೆ ಒಟ್ಟು 71 ಪ್ರಕರಣಗಳನ್ನು ಪರಿಶೀಲಿಸಲಾಯಿತು.

ಆಯೋಗದ ಸದಸ್ಯರಾದ ಪಿ.ಎಂ. ಜಾಬಿರ್, ಡಾ. ಮ್ಯಾಥ್ಯೂಸ್ ಕೆ. ಲೂಕೋಸ್, ಎಂ.ಎಂ. ನಈಮ್, ಜೋಸೆಫ್ ದೇವಸ್ಯ ಪೊನ್ಮಾಂಗಲ್ ಹಾಗೂ ಆಯೋಗದ ಕಾರ್ಯದರ್ಶಿ ಆರ್. ಜಯರಾಮ್ ಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries