ಕೊಚ್ಚಿ: ಕೊಟ್ಟಾಯಂ ಜಿಲ್ಲೆಯಲ್ಲಿಯ ಮುಸ್ಲಿಂ ಬಾಲಕಿಯರ ಪ್ರೌಢಶಾಲೆಯಲ್ಲಿ ಹುಡುಗರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಕೇರಳಂ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಈ ವಿಷಯದ ಬಗ್ಗೆ ಅರ್ಹತೆಯ ಆಧಾರದಲ್ಲಿ ಮರುಪರಿಶೀಲನೆಯ ಅಗತ್ಯವಿದೆ ಎಂದು ಅದು ತಿಳಿಸಿದೆ.
ಆದಾಗ್ಯೂ, ಆ ಸಂಸ್ಥೆಯಲ್ಲಿ ಹೊಸದಾಗಿ ಪ್ರವೇಶ ಪಡೆದ 28 ಗಂಡು ಮಕ್ಕಳ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಈ ವಿಚಾರವು ಮರುಪರಿಶೀಲನೆಗೆ ಒಳಪಡುವವರೆಗೆ ಅವರು ತಮ್ಮ ತರಗತಿಗಳಲ್ಲಿ ಮುಂದುವರಿಯಲು ಅವಕಾಶ ನೀಡಿ ಸದ್ಯದ ಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಮತ್ತು ಮುರಳಿಕೃಷ್ಣ ಅವರ ಪೀಠವು ಇರಟ್ಟುಪೆಟ್ಟಾದ ಮುಸ್ಲಿಂ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯನ್ನು ಸಹಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸಿರುವುದನ್ನು ಪ್ರಶ್ನಿಸಿ ಇತರ ಎರಡು ಶಾಲೆಗಳ ವ್ಯವಸ್ಥಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.8ರಂದು ಕೈಗೆತ್ತಿಕೊಂಡಿತ್ತು.
ಬಾಲಕಿಯರ ಶಾಲೆಯಲ್ಲಿ ಗಂಡು ಮಕ್ಕಳನ್ನು ಸೇರಿಸಿಕೊಳ್ಳುವುದರಿಂದ ಹತ್ತಿರದ ಇತರ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಬಾಲಕಿಯರ ಶಾಲೆಯ ಆಡಳಿತ ಮಂಡಳಿಯು ಬೇಸಿಗೆ ರಜೆಯ ಸಮಯದಲ್ಲಿ ಸಮೀಪದ ಶಾಲೆಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಿಕೊಳ್ಳದೆ ಅಥವಾ ಅವರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡದೆ ಏಕಸದಸ್ಯ ಪೀಠದ ಆದೇಶವನ್ನು ಪಡೆದುಕೊಂಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಈ ಆದೇಶದ ನಂತರ 5 ರಿಂದ 10ನೇ ತರಗತಿಗಳಲ್ಲಿ 28 ಹುಡುಗರು ಬಾಲಕಿಯರ ಶಾಲೆಯಲ್ಲಿ ಪ್ರವೇಶ ಪಡೆದಿದ್ದು, ಅವರು ಪ್ರಸ್ತುತ ಆ ಶಾಲೆಯಲ್ಲಿ ಓದುತ್ತಿದ್ದಾರೆ ಎನ್ನುವುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಕಕ್ಷಿದಾರರ ನಡುವೆ ಇರುವ ವಿವಾದದ ಅರಿವಿಲ್ಲದೆ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ರಿಟ್ ಅರ್ಜಿಯ ಕುರಿತು ಅರ್ಹತೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುವವರೆಗೆ ಆ ಶಾಲೆಯಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಪೀಠವು ತಿಳಿಸಿದೆ.



