ಕಠ್ಮಂಡು: ನೇಪಾಳದ ಮಧ್ಯ ಭಾಗದಲ್ಲಿ ನದಿಯೊಂದರಲ್ಲಿ ಪ್ರವಾಹ ಉಂಟಾಗಿ ಹಲವು ಮನೆಗಳು ಮತ್ತು ಮೂಲಸೌಕರ್ಯಗಳು ಕೊಚ್ಚಿಹೋಗಿವೆ ಎಂದು 'ರಾಯಿಟರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ. ಯಾವುದೇ ಸಾವು-ನೋವು ಸಂಭವಿಸಿರುವ ವರದಿಗಳಿಲ್ಲ.
ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಭಾನುವಾರ ಸೂಚಿಸಿದ್ದಾರೆ.
ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 100 ಕಿ.ಮೀ. ದೂರದಲ್ಲಿರುವ ಗೂರ್ಖಾ ಜಿಲ್ಲೆಯ ಚುಮ್ನುಬ್ರಿ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ ಬುಧಿ ಗಂಡಕಿ ನದಿಯ ಹರಿವಿಗೆ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧಿ ಗಂಡಕಿ ನದಿಯು ತ್ರಿಶೂಲಿ ನದಿಯ ಉಪನದಿ. ಕಳೆದ ಆಗಸ್ಟ್‌ನಲ್ಲಿ ಮತ್ತೊಂದು ಉಪನದಿಯ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಭೀಕರ ಪ್ರವಾಹ ಸಂಭವಿಸಿತ್ತು. ಈ ದುರಂತದಲ್ಲಿ 1,457 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿದ್ದರು.
'ನದಿಯ ಕೆಳಭಾಗದಲ್ಲಿ ವಾಸಿಸುವ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದೇವೆ' ಎಂದು ಗೂರ್ಖಾ ಜಿಲ್ಲೆಯ ಹಿರಿಯ ಆಡಳಿತಾಧಿಕಾರಿ ಧರ್ಮೇಂದ್ರ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಪ್ರವಾಹದಲ್ಲಿ 10ಕ್ಕೂ ಹೆಚ್ಚು ಮನೆಗಳು, ಎರಡು ತೂಗು ಸೇತುವೆಗಳು ಕೊಚ್ಚಿಹೋಗಿವೆ. ಜಲವಿದ್ಯುತ್ ಯೋಜನೆಯ ಶಿಬಿರವೂ ಹಾನಿಗೊಳಗಾಗಿದೆ ಎಂದು ಅವರು ಹೇಳಿದ್ದಾರೆ. ಶಿಬಿರದಲ್ಲಿದ್ದ 18 ಕಾರ್ಮಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಕೆಸರು ಮಿಶ್ರಿತ ನೀರಿನಿಂದ ನದಿಯ ಹರಿವು ಹೆಚ್ಚುತ್ತಿದ್ದು, ಗೂರ್ಖಾ ಮತ್ತು ನೆರೆಯ ಧಾದಿಂಗ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿ ಸೇತುವೆಯೂ ಕೊಚ್ಚಿಹೋಗಿದೆ.
ಭೂಕುಸಿತದ ಅಪಾಯ ಎದುರಿಸುತ್ತಿದ್ದ ಜಗತ್ ಪ್ರದೇಶದ ಆರು ಮಂದಿಯನ್ನು ಸೇನೆ ರಕ್ಷಿಸಿದೆ ಎಂದು ನೇಪಾಳದ ಪ್ರಧಾನಿ ಬಲೇಂದ್ರ ಶಾ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಗೂರ್ಖಾ, ತನಹುನ್, ಚಿತ್ವನ್, ಪೂರ್ವ ನವಲ್ಪರಾಸಿ ಮತ್ತು ಪಶ್ಚಿಮ ನವಲ್ಪರಾಸಿ ಜಿಲ್ಲೆಗಳ ನದಿ ತೀರದ ಜನರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಪ್ರವಾಹದ ಕುರಿತು ಎಚ್ಚರಿಕೆ ನೀಡಿದ್ದಾರೆ.
ಸೇನಾ ಮತ್ತು ಪೊಲೀಸ್ ರಕ್ಷಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿದ್ದು, ಹೆಲಿಕಾಪ್ಟರ್ ಮೂಲಕವೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


