ನವದೆಹಲಿ: ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಇದರೊಂದಿಗೆ ಅವರು 2027ರ ಅಕ್ಟೋಬರ್ 31ರವರೆಗೆ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಸಿಂಗ್ ಅವರ ಅಧಿಕಾರಾವಧಿ 2026ರ ಅಕ್ಟೋಬರ್ 31ರಂದು ಕೊನೆಗೊಳ್ಳಬೇಕಿತ್ತು. ರಕ್ಷಣಾ ಸಚಿವಾಲಯವು ಥಿಯೇಟರ್ ಕಮಾಂಡ್ ಗಳ (ಸಂಯೋಜಿತ ಸೇನಾ ಕಮಾಂಡ್‌ಗಳು) ರಚನೆ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೆಚ್ಚಿಸುವುದು ಹಾಗೂ ಪ್ರಮುಖ ಕಾರ್ಯತಂತ್ರಗಳ (ಡಾಕ್ಟ್ರಿನ್‌ಗಳ) ಜಾರಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಸ್ತರಣೆ ಮಹತ್ವ ಪಡೆದಿದೆ.
ಕೇರಳಂ ಕೇಡರ್ ನ 1989ರ ಬ್ಯಾಚ್ ನ IAS ಅಧಿಕಾರಿಯಾಗಿರುವ ರಾಜೇಶ್ ಕುಮಾರ್ ಸಿಂಗ್, 2024ರ ನವೆಂಬರ್ 1ರಂದು ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮುನ್ನ ಈ ಹುದ್ದೆಯಲ್ಲಿದ್ದ ಗಿರಿಧರ್ ಅರಮನೆ ಅವರು 2024ರ ಅಕ್ಟೋಬರ್ 31ರಂದು ನಿವೃತ್ತರಾಗಿದ್ದರು.
ಇದಕ್ಕೂ ಮೊದಲು, 2023ರ ಎಪ್ರಿಲ್ ನಿಂದ 2024ರ ಆಗಸ್ಟ್ ವರೆಗೆ ಸಿಂಗ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರದಲ್ಲಿ ಅವರು ಈ ಹಿಂದೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಕಾಮಗಾರಿ ಮತ್ತು ನಗರ ಸಾರಿಗೆ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಇದಲ್ಲದೆ, ಕೇರಳಂ ಸರ್ಕಾರದಲ್ಲಿ ನಗರಾಭಿವೃದ್ಧಿ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.



